ನವದೆಹಲಿ: ಮೂಗುತಿ ಸುಂದರಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಜನವರಿ 16ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಸಾನಿಯಾ ಮಿರ್ಜಾ ಅವರ ವೃತ್ತಿಜೀವನದ ಕಟ್ಟಕಡೆಯ ಗ್ರ್ಯಾಂಡ್ ಸ್ಲಾಂ ಟೂರ್ನಿಯಾಗಿರಲಿದೆ.
ಸಾನಿಯಾ ಮಿರ್ಜಾ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಫೆಬ್ರವರಿ 19 ರಂದು ಆರಂಭವಾಗಲಿರುವ ಡಬ್ಲ್ಯುಟಿಎ 1000 ದುಬೈ ಟೆನಿಸ್ ಚಾಂಪಿಯನ್‌ಶಿಪ್ ನಂತರ ಪೂರ್ಣ ಪ್ರಮಾಣದಲ್ಲಿ ನಿವೃತ್ತಿ ಹೊಂದುವುದಾಗಿ ಸಾನಿಯಾ ಈ ಹಿಂದೆ ಘೋಷಿಸಿದ್ದರು. ಇದೀಗ ಆಸ್ಟ್ರೇಲಿಯನ್ ಓಪನ್ ಮೂಲಕ ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಂ ಟೂರ್ನಿಗೆ ಅಣಿಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್ ನಂತರ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ. 30 ವರ್ಷಗಳ ಹಿಂದೆ ಹೈದರಾಬಾದ್‌ನ ಆರು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಟೆನಿಸ್ ಕೋರ್ಟ್‌ಗೆ ಹೋಗಿದ್ದಳು. ಆಗ ಅಲ್ಲಿದ್ದ ಕೋಚ್ ಒಬ್ಬರು ಟೆನಿಸ್ ಹೇಗೆ ಆಡುತ್ತಾರೆ ಎನ್ನುವುದನ್ನು ವಿವರಿಸಿದ್ದರು. ಅಂದು ನಾನು ಟೆನಿಸ್ ಕಲಿಯಲು ತುಂಬಾ ಚಿಕ್ಕವಳು ಎಂದು ಭಾವಿಸಿದ್ದೆ. ಆದರೆ, ನನ್ನ ಕನಸುಗಳ ಹೋರಾಟವು ಆರನೇ ವರ್ಷದಲ್ಲಿಯೇ ಪ್ರಾರಂಭವಾಗಿತ್ತು’ ಎಂದು ಸಾನಿಯಾ ಮಿರ್ಜಾ ಬರೆದುಕೊಂಡಿದ್ದಾರೆ.
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ನನ್ನ ಪೋಷಕರು ಮತ್ತು ಸಹೋದರಿ, ನನ್ನ ಕುಟುಂಬ, ನನ್ನ ಕೋಚ್, ಫಿಸಿಯೋ ಮತ್ತು ಇಡೀ ತಂಡದ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ನಗು, ಕಣ್ಣೀರು, ನೋವು, ನಲಿವುಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಂಡಿದ್ದೇನೆ. ಅದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನದ ಅತ್ಯಂತ ಕಷ್ಟದ ಹಂತದಲ್ಲಿ ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನೀವು ಹೈದರಾಬಾದ್‌ನ ಈ ಪುಟ್ಟ ಹುಡುಗಿಗೆ ಕನಸು ಕಾಣಲು ಧೈರ್ಯವನ್ನು ನೀಡಿದ್ದಲ್ಲದೆ ಆ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಿದ್ದೀರಿ ಎಂದು ಸಾನಿಯಾ ಭಾವುಕವಾಗಿ ಬರೆದುಕೊಂಡಿದ್ದಾರೆ.
ನನ್ನ ಗ್ರ್ಯಾಂಡ್ ಸ್ಲಾಮ್ ಪ್ರಯಾಣವು 2005 ರಲ್ಲಿ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ಪ್ರಾರಂಭವಾಯಿತು. ಹಾಗಾಗಿ, ಇದು ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಅತ್ಯಂತ ಪರಿಪೂರ್ಣವಾದ ಗ್ರ್ಯಾಂಡ್‌ಸ್ಲಾಮ್ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ನಾನು ಮೊದಲ ಬಾರಿಗೆ ಆಡಿದ 18 ವರ್ಷಗಳ ನಂತರ ನನ್ನ ಕೊನೆಯ ಆಸ್ಟ್ರೇಲಿಯನ್ ಓಪನ್ ಮತ್ತು ಫೆಬ್ರವರಿಯಲ್ಲಿ ದುಬೈ ಓಪನ್‌ನಲ್ಲಿ ಆಡಲು ತಯಾರಾಗುತ್ತಿರುವಾಗ, ಹೆಮ್ಮೆ ಮತ್ತು ಕೃತಜ್ಞತೆಯಿಂದ ನನ್ನಲ್ಲಿ ಅನೇಕ ಭಾವನೆಗಳು ಮಿನುಗುತ್ತಿವೆ. ನನ್ನ ವೃತ್ತಿಪರ ವೃತ್ತಿಜೀವನದ ಕಳೆದ 20 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾದ ಎಲ್ಲದರ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಮತ್ತು ನಾನು ರಚಿಸಲು ಸಾಧ್ಯವಾದ ನೆನಪುಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಬರೆದಿದ್ದಾರೆ.