ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದ್ದು ಇದೇ ಕಾರಣಕ್ಕೆ ಇದೀಗ ಸಾನಿಯಾ ಹಾಗೂ ಶೋಯೆಬ್ ವಿಚ್ಚೇದನಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸಾನಿಯಾ ಹಾಗೂ ಶೋಯೆಬ್ ಮದುವೆಗೆ ಭಾರತ ಹಾಗೂ ಪಾಕ್ ಎರಡು ದೇಶಗಳಲ್ಲೂ ಪರ, ವಿರೋಧಗಳು ವ್ಯಕ್ತವಾಗಿತ್ತು. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೋಡಿಗಳು ಗುರು ಹಿರಿಯರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದರು. ಈ ದಂಪತಿಗಳಿಗೆ ಒಬ್ಬ ಮಗನಿದ್ದು ಇದೀಗ ಈ ಜೋಡಿ ಡಿವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರಂತೆ.
ಸಾನಿಯಾ ಹಾಗೂ ಶೋಯೆಬ್ ಡಿವೋರ್ಸ್ ಸುದ್ದಿ ಹರಿದಾಡೋಕೆ ಕಾರಣವಾಗಿರೋದು ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್. ‘ಒಡೆದ ಹೃದಯಗಳು ಎತ್ತ ಸಾಗುತ್ತಿವೆ? ಅಲ್ಲನನ್ನು ಹುಡುಕಲು’ ಎಂದು ಸಾನಿಯಾ ಮಿರ್ಜಾ ಬರೆದುಕೊಂಡಿದ್ದಾರೆ. ಈ ಫೋಸ್ಟ್ ನೋಡಿದ ಸಾಕಷ್ಟು ಮಂದಿ ಇವರಿಬ್ಬರು ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್, ಸಾನಿಯಾಗೆ ವಂಚಿಸಿದ್ದು, ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದು ತಿಳಿದ ಬಳಿಕ ಸಾನಿಯಾ ಮತ್ತು ಶೋಯೆಬ್ ನಡುವೆ ಸಾಕಷ್ಟು ಭಾರಿ ಜಗಳಗಳಾಗಿದ್ದು ಇದೀಗ ಡಿವೋರ್ಸ್ ಹಂತಕ್ಕೆ ಬಂದು ತಲುಪಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಇನ್ಸ್‌ಟಾಗ್ರಾಂ ಪೋಸ್ಟ್‌ನಲ್ಲಿ ಮಗ ಇಜಾನ್ ಜೊತೆಗಿನ ಫೋಟೊ ಹಂಚಿಕೊಂಡು, ಕಷ್ಟದ ದಿನಗಳಿಂದ ಆಚೆ ಬರಲು ಸಹಕರಿಸಿದ ಸಂದರ್ಭ ಎಂದು ಬರೆದುಕೊಂಡಿದ್ದರು. ಇದೀಗ ಕೂಡ ದಂಪತಿ ಮಧ್ಯೆ ಎಲ್ಲವು ಸರಿ ಇಲ್ಲ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಿತ್ತು.