ವಾಣಿಜ್ಯ ಜಾಹಿರಾತು

ಬೆಂಗಳೂರು: ಕಳೆದ ಸಾಲಿನಂತೆ ಈ ಬಾರಿಯೂ ದ್ವಿತೀಯ ಪಿಯು‌ ಪರೀಕ್ಷೆಗೆ ಸಮವಸ್ತ್ರ ನೀತಿ ಕಡ್ಡಾಯವಾಗಿದ್ದು, ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮವಸ್ತ್ರ ನಿಯಮ ಪಾಲನೆ ಕಡ್ಡಾಯವಾಗಿದ್ದು. ಸಮವಸ್ತ್ರ ನಿಯಮ ಈಗಲೂ ಅನ್ವಯವಿದೆ. ಕಳೆದ ವರ್ಷದ ನಿಯಮವೇ ಈ ಬಾರಿಯೂ ಜಾರಿಯಲ್ಲಿರಲಿದ್ದು, ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವುದು ಬೇಡ. ಕಳೆದ ವರ್ಷ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ಪರೀಕ್ಷೆ ಬರೆದಿಲ್ಲ. ಮಾಧ್ಯಮದ ಮೂಲಕ ಅವರಿಗೆ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಿ ಎಂದು ಸಚಿವರು ಮನವಿ ಮಾಡಿದರು.

ನಾಳೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 7,26,195 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ 2,47,260, ವಿಜ್ಞಾನ ವಿಭಾಗದಲ್ಲಿ 2,44,120 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ಒಟ್ಟು 5,716 ಕಾಲೇಜುಗಳ ಪೈಕಿ 1,109 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2,373 ವಿಶೇಷ ಜಾಗೃತ ದಳ ರಚಿಸಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್, ವಾಚ್ ತರುವುದನ್ನು ನಿಷೇಧಿಸಲಾಗಿದೆ. ವೈದ್ಯರ ಸಲಹಾ ಪತ್ರ ತರುವ ವಿಶೇಷಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಈ ಬಾರಿ ಹೆಚ್ಚು ಸಮಯ ನೀಡುತ್ತೇವೆ ಎಂದರು.

ಪ್ರಶ್ನೆ ಪತ್ರಿಕೆಯಲ್ಲಿ 20 ಅಂಕಗಳ ಎಂಸಿಕ್ಯೂ ಮಾದರಿ ಪ್ರಶ್ನೆಗಳು ಇರುತ್ತವೆ. ಮೌಲ್ಯಮಾಪನ ಬಳಿಕ ಐದು ಅಂಕಕ್ಕಿಂತ ಕಡಿಮೆ ಆದರೂ ಮಾರ್ಕ್ಸ್ ಕಾರ್ಡ್‌ನಲ್ಲಿ ಎಂಟ್ರಿ ಮಾಡಿಕೊಡುತ್ತೇವೆ. ಇದನ್ನು ಹೊಸದಾಗಿ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.