ಕಾಪು: ಉಚ್ಚಿಲ ರಾ. ಹೆದ್ದಾರಿ 66ರ ಅನಾಫಿ ಮಸೀದಿ ಎದುರು ಸರಣಿ ಅಪಘಾತ ನಡೆದಿದ್ದು, ನಾಲ್ಕು ವಾಹನ ಜಖಂಗೊಂಡಿದೆ. ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯತನ ಚಾಲನೆಯೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕ ಎರ್ಮಾಳು ರಾ. ಹೆದ್ದಾರಿ 66 ರಲ್ಲಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೇ ಅತಿವೇಗದಿಂದ ಬಂದು ಉಚ್ಚಿಲ ರಾ. ರಾಷ್ಟ್ರೀಯ ಹೆದ್ದಾರಿ 66ರ ಅನಾಫಿ ಮಸೀದಿಯ ಬಳಿ ಎರ್ಟಿಗಾ ಕಾರು ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ವಿಭಾಜಕ ಏರಿ ಇನ್ನೊಂದು ಪಥದತ್ತ ತಿರುಗಿ ನಿಂತಿದೆ. ಘಟನೆಯಲ್ಲಿ ಗಾಯಗೊಂಡ ಸ್ಕೂಟಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
.ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.