ಚಂಡೀಗಢ: ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಿವಸೇನೆ ಮುಖಂಡನ ಮೇಲೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಶಿವಸೇನೆ ಮುಖಂಡ ಮೃತಪಟ್ಟಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.
ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆಯ ಮುಖಂಡರಾಗಿದ್ದ ಸುಧೀರ್ ಸೂರಿ ಮೃತ ವ್ಯಕ್ತಿ. ಸುಧೀರ್ ಸೂರಿ ದೇವಸ್ಥಾನದ ಹೊರಗಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸುಧೀರ್ ಸೂರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸುಧೀರ್ ಸೂರಿ ಮೃತಪಟ್ಟಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ನಿರ್ದಿಷ್ಟ ಸಮುದಾಯದ ಕುರಿತು ಅಕ್ಷೇಪಾರ್ಹ ಭಾಷಣ ಮಾಡಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಆ ಬಳಿಕ ಸುಧೀರ್ ಸೂರಿ ಮೇಲೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದವು. ಇದೀಗ ಸುಧೀರ್ ಸೂರಿ ದುಷ್ಕರ್ಮಿಯ ಗುಂಡೇಟಿಗೆ ಬಲಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಪಂಜಾಬ್ ನಲ್ಲಿ ಈ ಹಿಂದೆ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅವರನ್ನು ತಂಡವೊಂದು ಗುಂಡಿಕ್ಕಿ ಭರ್ಬರವಾಗಿ ಹತ್ಯೆ ಮಾಡಿದ್ದು ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಮುಖಂಡನ ಹತ್ಯೆಯಾಗಿದೆ.