ವಾಣಿಜ್ಯ ಜಾಹಿರಾತು

ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇಂದು ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಭದ್ರತಾ ದೃಷ್ಟಿಯಿಂದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಶುಕ್ರವಾರದ ವರೆಗೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ ನಗರದಲ್ಲಿ ನಡೆದ ಅಹಿತಕರ ಘಟನೆ ವಿಚಾರವಾಗಿ ಪೊಲೀಸರ ಪಾತ್ರದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ವಿಚಾರವಾಗಿ ತನಿಖೆ ನಡೆದು ಒಂದು ವಾರದೊಳಗೆ ವಿಸ್ತೃತ ವರದಿ ನೀಡಬೇಕು. ಜೊತೆಗೆ ಬಂಧಿತ ಆರೋಪಿಗಳ ವಿರುದ್ದ ಜಿಲ್ಲೆಯ ದೊಡ್ಡಪೇಟೆ ಮತ್ತು ಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಾಹಿತಿಯ ಕುರಿತು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಈ ಆರೋಪಿಗಳ ಮೇಲೆ ಎರಡೂ ಠಾಣೆಗಳಲ್ಲಿ ಕಳೆದ 5 ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಆರಕ್ಷಕ ಮಹಾ ನಿರೀಕ್ಷಕರಿಗೆ ಆದೇಶ ನೀಡಿದ್ದಾರೆ.

ಶಾಸಕರಿಂದ ಪರಿಹಾರ ಘೋಷಣೆ

ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿಂದೂ ಸಮಾಜಕ್ಕೆ ದೊಡ್ಡ ನಷ್ಟ. ದು:ಖದಲ್ಲಿರುವ ಕುಟುಂಬಕ್ಕೆ ರೂ.2 ಲಕ್ಷ ದೇಣಿಗೆ ನೀಡುವ ಮೂಲಕ ನನ್ನ ಬೆಂಬಲವನ್ನು ನೀಡುತ್ತೇನೆ. ಈ ದುರದೃಷ್ಟಕರ ನಷ್ಟವನ್ನು ಭರಿಸುವ ಶಕ್ತಿ ಭಗವಂತ ಕುಟುಂಬದವರಿಗೆ ನೀಡಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ನಾವು ನಮ್ಮ ಪರಿವಾರದ ಸಂಘಟನೆಯ ಕಾರ್ಯಕರ್ತರಾದ ಶಿವಮೊಗ್ಗದ ಹರ್ಷ ಅವರನ್ನು ಕಳೆದುಕೊಂಡಿದ್ದೇವೆ. ಈ ದು:ಖದ ಸಮಯದಲ್ಲಿ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. 1 ಲಕ್ಷ ಸಹಾಯಧನ ನೀಡುವ ಮೂಲಕ ವರ ಕುಟುಂಬಕ್ಕೆ ಬೆಂಬಲವನ್ನು ನೀಡುತ್ತೇನೆ. ನಾವೆಲ್ಲರೂ ಈ ಸಂದರ್ಭದಲ್ಲಿ ಮೃತ ಹರ್ಷ ಕುಟುಂಬದ ಬೆಂಬಲಕ್ಕೆ ನಿಲ್ಲೋಣ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಯು ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.