ಮೂಡುಬಿದಿರೆ: ತಾಲೂಕಿನ ತೋಡಾರು ಗ್ರಾಮದಲ್ಲಿರುವ ಶ್ರೀ ಕೊಡಮಣಿತ್ತಾಯ , ಬ್ರಹ್ಮಶ್ರೀ ಬೈದರ್ಕಳ ಗರಡಿಯಲ್ಲಿ ಡಿ.22ರಿಂದ ಮೊದಲ್ಗೊಂಡು ಡಿ.26ರವರೆಗೆ ಕಾಲಾವಧಿ ಜಾತ್ರೋತ್ಸವ ಜರುಗಲಿದೆ. ಡಿ22ರಂದು ಬುಧವಾರ ರಾತ್ರಿ 8 ಗಂಟೆಗೆ ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಳ್ಳಲಿದೆ. ಡಿ.23ರಂದು ಗುರುವಾರ ಸಂಜೆ 6.30ಕ್ಕೆ ದುರ್ಗಾ ನಮಸ್ಕಾರ ಪೂಜೆ, ಅನ್ನಸಂತರ್ಪಣೆ ಹಾಗೂ ರಾತ್ರಿ ಶ್ರೀ ದೈವದ ನೇಮೋತ್ಸವ ಜರುಗಲಿದೆ.
ಡಿ.24ರಂದು ಶುಕ್ರವಾರ ಬೆಳಿಗ್ಗೆ 9.00ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಅನ್ನಸಂತರ್ಪಣೆ, ರಾತ್ರಿ 7ಗಂಟೆಯಿಂದ 10 ರವರೆಗೆ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 8 ಕ್ಕೆ ಜೋಡುಮೂರ್ತಿ ಬಲಿ, 10 ಗಂಟೆಗೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ.
ಡಿ.25ರಂದು ಶನಿವಾರ ರಾತ್ರಿ ಸಂಜೆ 7 ರಿಂದ ಅನ್ನಸಂತರ್ಪಣೆ, ರಾತ್ರಿ 10ರಿಂದ ಶ್ರೀ ಬೈದರ್ಕಳ ನೇಮೋತ್ಸವ ಜರುಗಲಿದೆ. ಡಿ.26ರಂದು ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಭಕ್ತಾದಿಗಳೆಲ್ಲರೂ ಕ್ಷೇತ್ರಕ್ಕೆ ಆಗಮಿಸಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗುವಂತೆ ಸಮಿತಿ ಕೋರಿದೆ.
ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಧ್ವಜಾರೋಹಣಕ್ಕೂ ಮುನ್ನಾ ದಿನ ಮೂಲ ಸಾನಿಧ್ಯಕ್ಕೆ ತೆರಳಿ ದೀಪ ಇಡುವ ಸಂಪ್ರದಾಯವಿದೆ. ತೋಡಾರುಗುತ್ತುವಿನಿಂದ ಮೂಲಸಾನಿಧ್ಯ ಬಾಂದ್ ಗೆ ತೆರಳಿ ದೀಪ ಇಡುತ್ತಾರೆ. ರಾತ್ರಿ ಗಾಳಿಗುಡ್ಡೆಯಲ್ಲಿ ಮುಹೂರ್ತದ ಚಪ್ಪರಬಲಿಸೇವೆ ನಡೆಯುತ್ತದೆ.
ಸುಮಾರು 700-800 ವರ್ಷಗಳ ಇತಿಹಾಸವಿರುವ ಈ ಪುಣ್ಯಕ್ಷೇತ್ರದಲ್ಲಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದು ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಇಲ್ಲಿ ನಡೆಯುವ ಕೊಡಮಣಿತ್ತಾಯ ದೈವದ ನೇಮ ಬಹಳಾನೇ ಪ್ರಸಿದ್ಧಿಯಾಗಿದ್ದು ಈ ನೇಮೋತ್ಸವ ನೋಡಲು ದೂರದೂರುಗಳಿಂದಲೂ ಜನಸಾಗರವೇ ಹರಿದುಬರುತ್ತದೆ. ತುಡರ ಬಲಿ ಇಲ್ಲಿ ಸಲ್ಲಿಸುವ ಪ್ರಮುಖ ಹರಕೆಯಲ್ಲೊಂದು. ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಜನ ತುಡರ ಬಲಿ ಸೇವೆಯನ್ನು ಕೊಟ್ಟು ಹರಕೆ ತೀರಿಸುತ್ತಾರೆ.ಇನ್ನು ನಡಾವಳಿ ಸಂದರ್ಭದಲ್ಲಿ ಕೊಡುವ ಒಕುಳಿ ಗಂಧಪ್ರಸಾದಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ.