ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜ ಅವರ ಮದುವೆ ಯಾವಾಗ? ಎನ್ನುವ ಕುತೂಹಲಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಹಸೆಮಣೆ ಏರಲಿದ್ದೇನೆ ಎಂದು ಶುಭಾ ಸ್ಪಷ್ಟಪಡಿಸಿದ್ದಾರೆ.
ಕರಾವಳಿ ಮೂಲದ ಉದ್ಯಮಿ ಸುಮಂತ್ ಮಹಾಬಲ ಎಂಬುವವರನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ, ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದು, ಒಂದು ವರ್ಷದ ಪ್ರೀತಿಗೆ ಶೀಘ್ರ ‘ಮದುವೆಯ’ ಮುದ್ರೆ ಬೀಳಲಿದೆ.
ಸುಮಂತ್ ಜಯ ಕರ್ನಾಟಕ ಸಂಘಟನೆಯ ಸೌತ್‌ವಿಂಗ್ ಅಧ್ಯಕ್ಷರಾಗಿದ್ದಾರೆ. ಜತೆಗೆ ಕಮರ್ಷಿಯಲ್ ಗ್ಯಾಸ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಕರೊನಾ ಲಾಕ್‌ಡೌನ್ ಹಿನ್ನೆಲೆ ಮದುವೆಯನ್ನು ಡಿಸೆಂಬರ್ ವೇಳೆಗೆ ನಡೆಸಲು ಮನೆಯವರು ನಿರ್ಧರಿಸಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಎನ್ನುವ ಶುಭಾ, ನನ್ನ ತಾಯಿಗೆ ಸುಮಂತ್ ಬಗ್ಗೆ ತಿಳಿದಿದೆ. ಶೀಘ್ರದಲ್ಲೇ ಮದುವೆ ದಿನಾಂಕ ಘೋಷಿಸುವುದಾಗಿ ತಿಳಿಸಿದ್ದಾರೆ.
ಶುಭಾ ಪೂಂಜ ಕನ್ನಡದ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿಯೂ ಬಣ್ಣ ಹಚ್ಚಿದ್ದಾರೆ. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶುಭಾಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. ಮಾಡೆಲಿಂಗ್ ಬರುವ ಮುನ್ನ ಅವರು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊದಲು ಶುಭಾ ತಮಿಳಿನ ‘ಮಾಚಿ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 2006ರಲ್ಲಿ ‘ಜಾಕ್‌ಪಾಟ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಶುಭಾ ಪೂಂಜ ನಟನೆಯ ‘ತ್ರಿದೇವಿ’, ‘ರೈಮ್ಸ್’ ಚಿತ್ರ ರಿಲೀಸ್ ಆಗಬೇಕಿದೆ.‘ತ್ರಿದೇವಿ’ ಚಿತ್ರದಲ್ಲಿ ಪೂಂಜ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಕೆಲಸ ಮಾಡುತ್ತಿದ್ದಾರೆ.