ವಾಣಿಜ್ಯ ಜಾಹಿರಾತು

ಸಂಡೇ ಬಂತು ಅಂದರೆ ಸಾಕು ಏನ್ ತಿಂಡಿ ಮಾಡೋದಪ್ಪಾ ಅನ್ನೋದೆ ಗೃಹಿಣಿಯರ ಟೆನ್ಶನ್. ಭಾನುವಾರ ರಜಾ ದಿನವಾಗಿರುವ ಕಾರಣ ಏನಾದ್ರೂ ಸ್ಪೆಷಲ್ ಬೇಕು ಅನ್ನೋದು ಮನೆಯವರೆಲ್ಲರ ಡಿಮ್ಯಾಂಡ್. ಆದರೆ ಸಂಡೇ ಈಸ್ ಹಾಲಿಡೇ ಅನ್ನೋ ಹಾಗೇ ಕೆಲಸದಲ್ಲಿ ಕೈ ಜೋಡಿಸೋಕೆ ಮಾತ್ರ ಯಾರೂ ತಯಾರಿಲ್ಲ. ಹೀಗಾಗಿ, ಥಟ್ಟಂತ ದಿಢೀರ್ ಆಗಿ ರೆಡಿಯಾಗೋ ಬ್ರೇಕ್ ಫಾಸ್ಟ್ ತಯಾರಿಸಿಬಿಡೋಣ ಅಂತ ಹಲವರು ಅಂದುಕೊಳ್ಳುತ್ತಾರೆ.

ಆದರೆ, ದಿಢೀರ್ ಅಂತ ಮಾಡೋದಾದ್ರೂ ಏನು..ಏನ್ ಮಾಡೋಕೆ ಹೋದ್ರೂ ತುಂಬಾ ಸಮಯ ತೆಗೆದುಕೊಳ್ಳುತ್ತೆ ಎನ್ನುವವರಿಗೆ ಇಲ್ಲಿದೆ ಕೆಲವೊಂದು ರೆಸಿಪಿ. ಭಾನುವಾರ ಅಲ್ವಾ ಸ್ಪಲ್ಪ ತಡವಾಗಿ ಏಳೋಣ ಅಂತ ಅಂದ್ಕೊಂಡ್ರೂ ನೋ ಪ್ರಾಬ್ಲೆಮ್..ಯಾಕಂದ್ರೆ ಈ ತಿಂಡಿಗಳು ಹೆಚ್ಚು ಸಮಯ ತೆಗೆದುಕೊಳ್ಳದೆ ಥಟ್ಟಂತ ರೆಡಿ ಮಾಡಬಹುದು.

ಸಿಂಪಲ್ ಸ್ಯಾಂಡ್‍ವಿಚ್‍ಬೇಕಾದ ಸಾಮಗ್ರಿಗಳು

1 ಪ್ಯಾಕೆಟ್ ಬ್ರೆಡ್

ಈರುಳ್ಳಿ 1

ಹಸಿಮೆಣಸು 4

ಹಣ್ಣಾದ ಟೊಮೆಟೋ 3

ಕ್ಯಾರೆಟ್ 2, ಬೀನ್ಸ್‍ 4-5

ಖಾರದ ಪುಡಿ 1 ಸ್ಪೂನ್

ಗರಂ ಮಸಾಲ 1 ಸ್ಪೂನ್‍

ಜೀರಿಗೆ, ಕೊತ್ತಂಬರಿ ಪುಡಿ ಸ್ಪಲ್ಪ

ಅರಿಶಿನ, ಉಪ್ಪು ಸ್ಪಲ್ಪ

ಮಾಡುವ ವಿಧಾನ

ಮೊದಲಿಗೆ ಗ್ಯಾಸ್ ಮೇಲೆ ತವಾ ಇಟ್ಟು ಬ್ರೆಡ್ ಅನ್ನು ಎರಡೂ ಬದಿಯಲ್ಲಿ ಕಂದುಬಣ್ಣ ಬರುವ ವರೆಗೂ ಬಿಸಿ ಮಾಡಿ. ನಂತರ ಇನ್ನೊಂದು ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಸ್ಪಲ್ಪ ಬೆಣ್ಣೆ ಹಾಕಿ ಈರುಳ್ಳಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ನಂತರ ಸಣ್ಣದಾಗಿ ಹೆಚ್ಚಿದ ಹಸಿಮೆಣಸು, ಕ್ಯಾರೆಟ್, ಬೀನ್ಸ್ ಸೇರಿಸಿ ಫ್ರೈ ಮಾಡಿ. (ಮನೆಯಲ್ಲಿ ಬೇರೆ ಆಲೂಗಡ್ಡೆ, ಗೋಬಿ. ಕ್ಯಾಬೇಜ್‍, ಈ ರೀತಿಯ ಯಾವುದೇ ತರಕಾರಿಯಿದ್ದರೂ ಸೇರಿಸಿಕೊಳ್ಳಬಹುದು.) ನಂತರ ಟೊಮೆಟೋ ಸೇರಿಸಿ. ಬಳಿಕ ಖಾರದ ಪುಡಿ, ಗರಂ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ ಸ್ಪಲ್ಪ, ರುಚಿಗೆ ತಕ್ಕಷ್ಟು ಅರಿಶಿನ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಈ ಮಸಾಲೆಯನ್ನು ಎರಡು ಬ್ರೆಡ್ ಗಳ ಮಧ್ಯೆಯಿಟ್ಟು ಮತ್ತೊಮ್ಮೆ ತವಾದಲ್ಲಿ ಬಿಸಿ ಮಾಡಿ ಸರ್ವ್ ಮಾಡಿ. ಸಿಂಪಲ್ ಆಂಡ್ ದಿಢೀರ್ ಬ್ರೇಕ್ ಫಾಸ್ಟ್ ರೆಡಿಯಾಗುತ್ತದೆ.

ದಿಢೀರ್ ಅವಲಕ್ಕಿ ಇಡ್ಲಿಬೇಕಾದ ಸಾಮಗ್ರಿಗಳು

ಅರ್ಧ ಕಪ್ ಅವಲಕ್ಕಿ

ಮುಕ್ಕಾಲು ಕಪ್ ಇಡ್ಲಿ ರವೆ

1 ಕಪ್ ಮೊಸರು

ರುಚಿಗೆ ತಕ್ಕಷ್ಟು ಉಪ್ಪು

ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಅರ್ಧ ಕಪ್ ಅವಲಕ್ಕಿಗೆ 1 ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಐದರಿಂದ ಹತ್ತು ನಿಮಿಷಗಳ ಕಾಲ ನೆನೆಯಲು ಹಾಗೇ ಬಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬೇಕಾದಷ್ಟು ನೀರು ಸೇರಿಸಿಕೊಳ್ಳುತ್ತಿರಿ. (ಮೊಸರು ಸ್ಪಲ್ಪ ಹುಳಿಯಾಗಿದ್ದರೆ ಇಡ್ಲಿ ಚೆನ್ನಾಗಿ ಬರುತ್ತದೆ.). ಈ ಹಿಟ್ಟನ್ನು ಒಂದು ಪಾತ್ರೆಗೆ ಸುರಿದು ಮುಕ್ಕಾಲು ಕಪ್ ಇಡ್ಲಿ ರವಾ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸಿ. ಅಡುಗೆ ಸೋಡಾ ಸೇರಿಸದಿದ್ದರೂ ಪರವಾಗಿಲ್ಲ. ನಂತರ ಈ ಹಿಟ್ಟನ್ನು ಎಣ್ಣೆ ಸವರಿ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಲು ಇಡಿ. 10ರಿಂದ 12 ನಿಮಿಷ ಇಡ್ಲಿಯನ್ನು ಬೇಯಿಸಿ. ಮೆತ್ತಗಿರುವ ಅವಲಕ್ಕಿ ಇಡ್ಲಿ ಸವಿಯಲು ರೆಡಿ.

ರವಾ ರೊಟ್ಟಿಬೇಕಾದ ಸಾಮಗ್ರಿಗಳು

3 ಕಪ್ ಚಿರೋಟೆ ರವೆ

1 ಕಪ್ ಮೊಸರು

1 ಕಪ್ ತೆಂಗಿನ ತುರಿ

ಈರುಳ್ಳಿ 1

ಹಸಿಮೆಣಸಿನಕಾಯಿ 2

ಶುಂಠಿ ಸ್ಪಲ್ಪ

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಚಿರೋಟಿ ರವೆಗೆ 2 ಕಪ್ ನೀರನ್ನು, 1 ಕಪ್ ಮೊಸರನ್ನು ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಆದ ಬಳಿಕ 1 ಕಪ್ ತೆಂಗಿನ ತುರಿ ಸೇರಿಸಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ಅರ್ಧಗಂಟೆ ಹಾಗೇ ಬಿಡಿ. ಅರ್ಧಗಂಟೆಯ ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ,ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾವಲಿಗೆ ಎಣ್ಣೆ ಹಾಕಿ, ಗ್ಯಾಸ್ ಸಣ್ಣ ಉರಿ ಮಾಡಿಕೊಂಡು ತೆಳುವಾಗಿ ರೊಟ್ಟಿ ತಟ್ಟಿಕೊಳ್ಳಿ. ಮೇಲಿಂದ 1 ಸ್ಪೂನ್ ತುಪ್ಪ ಹಾಕಿಕೊಳ್ಳಿ. ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ ತೆಗೆದರೆ ಈ ರುಚಿಯಾದ ರವಾರೊಟ್ಟಿ ಸಿದ್ಧವಾಗುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.