ಕೆಲಸಕ್ಕೆ ಹೋಗುವವರಿಗೆ ಒಂದು ಚಿಂತೆ ಆದರೆ, ಮನೆ ಸಂಭಾಳಿಸಿಕೊಂಡು ಹೋಗುವ ಗೃಹಿಣಿಯರಿಗೆ ನೂರಾರು ಚಿಂತೆ. ಅದರಲ್ಲೂ ಗೃಹಿಣಿಯರ ಅರ್ಧ ಆಯಸ್ಸು ಕಳೆದುಹೋಗೋದೇ ಅಡುಗೆ ಏನು ಮಾಡಲಿ ಅನ್ನೋ ಪ್ರಶ್ನೆಯಲ್ಲೇ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್, ರಾತ್ರಿ ಊಟ.. ದಿನಕ್ಕೆ 4 ಬಾರಿ ಏನು ಬೇಯಿಸಿ ಹಾಕೋದು. ಮಕ್ಕಳಿಗೆ ಏನು ಕೊಡಲಿ, ಆಫೀಸಿಂದ ಬರುವ ಗಂಡನಿಗೆ ಏನು ಮಾಡಿ ಹಾಕಲಿ ಅನ್ನೋದೇ ದೊಡ್ಡ ತಲೆನೋವು. ಅಂಥವರಿಗೆ ಇಲ್ಲಿದೆ ಕೆಲ ರುಚಿಕರ ಅಡುಗೆ ರೆಸಿಪಿಗಳು.
ಸಾಮಾನ್ಯವಾಗಿ ಮಧ್ಯಾಹ್ನದ ಅನ್ನವೋ ಅಥವಾ ರಾತ್ರಿ ಮಾಡಿದ ಅನ್ನವೋ ಉಳಿದುಹೋಗಿಬಿಡುತ್ತೆ. ಅದನ್ನು ಮತ್ತೆ ತಿನ್ನೋಕೆ ಚೆನ್ನಾಗಿರಲ್ಲ. ಬಿಸಾಡೋಕೆ ಮನಸ್ಸು ಬರಲ್ಲ. ಅಂಥ ಟೈಮಲ್ಲಿ ಆ ತಣ್ಣಗಿನ ಅನ್ನದಿಂದಲೂ ಬಿಸಿ ಬಿಸಿಯಾದ ಬಾಯಿ ಚಪ್ಪರಿಸುವಂಥ ತಿಂಡಿ ಮಾಡಿಕೊಂಡು ತಿನ್ನಬಹುದು. ಅದು ಬೆಳಗ್ಗೆಗಾದ್ರೂ ಸರಿ, ಸಂಜೆ ಟೀ ಜೊತೆಗಾದ್ರೂ ಸರಿನೇ. ಅತ್ತ ಅನ್ನ ಕೂಡಾ ಹಾಳಾಗಲ್ಲ, ಇತ್ತ ತಿಂಡಿ ಚಿಂತೆನೂ ಮಾಯ.
ಅಂದಹಾಗೆ, ಉಳಿದ ಅನ್ನದಿಂದ ಡಿಫರೆಂಟ್ -ಡಿಫರೆಂಟ್ ತಿಂಡಿ ಮಾಡಿಕೊಳ್ಳೋದಕ್ಕೆ ಆಗುತ್ತೆ. ಆದರೆ ಇಲ್ಲಿ 5 ರೆಸಿಪಿಗಳನ್ನು ಕೊಡ್ತೀವಿ ಓದಿ.
1.ವೆಜಿಟೇಬಲ್ ಫ್ರೈಡ್ ರೈಸ್: ಹೋಟೆಲ್‍ನಲ್ಲಿ ಮಾಡುವ ವೆಜಿಟೇಬಲ್ ಫ್ರೈಡ್ ರೈಸ್‍ಗೆ ತುಂಬಾ ಆಹಾರ ಪದಾರ್ಥಗಳು, ಮಸಾಲೆಗಳನ್ನು ಹಾಕುತ್ತಾರೆ. ಆದರೆ ಅದನ್ನು ಸರಳವಾಗಿ ಕೂಡಾ ಮನೆಯಲ್ಲಿ ಜಾಸ್ತಿ ಸಾಮಾಗ್ರಿಗಳನ್ನು ಬಳಸದೆಯೂ ಮಾಡಬಹುದು. ಇದೊಂದು ಬಹಳ ಸರಳವಾದ ಅಡುಗೆ. ಮೊದಲಿಗೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಮ್, ಟೊಮೆಟೊ, ಆಲೂಗಡ್ಡೆ, ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ,
ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಒಗ್ಗರಣೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ, ಬಳಿಕ ಈರುಳ್ಳಿ, ಟೊಮೆಟೋ ಹಾಕಿ ಅವುಗಳನ್ನೂ ಬೇಯಿಸಿ, ಆಮೇಲೆ ಕತ್ತರಿಸಿಟ್ಟ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಿ, ಅದಕ್ಕೆ ಸ್ಪಲ್ಪ ಅರಿಶಿನಪುಡಿ, ಮೆಣಸಿನಪುಡಿ, ಉಪ್ಪು, ಬೇಕಿದ್ದರೆ ಸೋಯಾ ಸಾಸ್, ವಿನೆಗರ್ ಸೇರಿಸಿ. ಬಳಿಕ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೇವಲ 15 ನಿಮಿಷದಲ್ಲಿ ಈ ರೆಸಿಪಿ ಸವಿಯಲು ಸಿದ್ಧ.
2. ಮೊಸರನ್ನ: ಮೊದಲಿಗೆ ಒಂದು ಪಾತ್ರೆಗೆ ಮೊಸರು ಹಾಕಿ ಅದಕ್ಕೆ ಅನ್ನ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಅದಕ್ಕೆ ಹಸಿ ಮೆಣಸಿನಕಾಯಿ, ಶುಂಠಿ, ಸ್ವಲ್ಪ ಹಾಲು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿರಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಗ್ಯಾಸ್ ಮೇಲಿಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವಿನ ಎಲೆ, ಗೋಡಂಬಿಯನ್ನು ಹಾಕಿ ಚೆನ್ನಾಗಿ ಹುರಿದು ಅನ್ನಕ್ಕೆ ಬೆರೆಸಿರಿ. ಬಳಿಕ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೊಸರನ್ನಕ್ಕೆ ಮಿಕ್ಸ್ ಮಾಡಿ, ಮನೆಯಲ್ಲಿ ದಾಳಿಂಬೆ ಇದ್ದರೆ ಅದರ ಕಾಳುಗಳನ್ನು ಮೊಸರನ್ನದ ಮೇಲೆ ಹಾಕಿ ಸೇವಿಸಿರಿ. ಉಪ್ಪಿನಕಾಯಿ ಜತೆ ಸೇವಿಸಿದರೆ ಬಲು ರುಚಿ.
3. ವಘೇರೇಲಾ ಚಾವಲ್: ಫಟಾಫಟ್ ಅಂತ ತಯಾರಿಸಬಹುದಾದ ಗುಜಾರಾತಿ ತಿನಿಸು ಇದು. ರಾಯತ ಇದಕ್ಕೆ ಬೆಸ್ಟ್ ಕಾಂಬಿನೇಷನ್. ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿ ಫ್ರೈ ಮಾಡಿಕೊಳ್ಳಿ. ನಂತರ ಎಣ್ಣೆಯಿಂದ ಈರುಳ್ಳಿ ತೆಗೆದುಕೊಂಡು ಪಕ್ಕಕ್ಕಿಡಿ. ಈಗ ಎಣ್ಣೆಗೆ ಸಕ್ಕರೆ ಹಾಕಿ ಪಾಕ ತೆಗೆದುಕೊಳ್ಳಬೇಕು. ಸಣ್ಣಗೆ ಕತ್ತರಿಸಿದ ಈರುಳ್ಳಿ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಈ ಮಿಶ್ರಣವನ್ನು ಅನ್ನದೊಟ್ಟಿಗೆ ಬೆರೆಸಿಕೊಂಡರೆ ವಘೇರೇಲಾ ಚಾವಲ್ ರೆಡಿ.
4. ಬರ್ನ್ಟ್ ಗಾರ್ಲಿಕ್ ಮಶ್ರೂಮ್ ಫ್ರೈಡ್ ರೈಸ್: ರೆಸ್ಟೋರೆಂಟ್‍ನಲ್ಲಿ ಲಭ್ಯವಿರುವ ಈ ಖಾದ್ಯವನ್ನು ಮನೆಯಲ್ಲೂ ಸುಲಭವಾಗಿ ತಯಾರಿಸಬಹುದು. ಉಳಿದುಕೊಂಡ ಅನ್ನ, ಕೆಲವೇ ಸಾಮಾಗ್ರಿಯಿಂದ ರುಚಿಕರ ತಿನಿಸು ರೆಡಿಯಾಗುತ್ತದೆ. ಎಣ್ಣೆಯಲ್ಲಿ ಮಶ್ರೂಮ್, ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್, ಫ್ರೆಂಚ್ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಕರಿಮೆಣಸು, ಸೋಯಾ ಸಾಸ್, ವಿನೆಗರ್ ಫ್ರೈ ಮಾಡಿ, ಬಳಿಕ ಉಳಿದ ಅನ್ನವನ್ನು ಸೇರಿಸಿ. ಅದಕ್ಕೆ ಉಪ್ಪು, ಖಾರ ನೋಡಿಕೊಂಡು ಹಾಕಿ.
5. ಜಾಫ್ರಾನಿ ಪುಲಾವ್: ಕ್ರೀಮ್‍ಭರಿತ ಜಾಫ್ರಾನಿ ಪುಲಾವ್ ಅಂತೂ ನೋಡಲು ಮತ್ತು ತಿನ್ನಲು ಪ್ರಿಯವಾಗುತ್ತದೆ. ನಟ್ಸ್, ಕೇಸರಿ ಮತ್ತು ಸಂಪೂರ್ಣ ಪರಿಮಳ ಭರಿತ ಈ ಸಿಹಿ ಪುಲಾವ್ ತಿನ್ನಲೂ ಅಷ್ಟೇ ರುಚಿ. ಮೊದಲಿಗೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಕತ್ತರಿಸಿಟ್ಟ ಒಣ ಹಣ್ಣುಗಳನ್ನು ಹಾಕಿ ಫ್ರೈ ಮಾಡಿ. ಬಳಿಕ ಸ್ವಲ್ಪ ಬೆಲ್ಲವನ್ನು ಬೆರೆಸಬೇಕು. ಬಳಿಕ ಬಿಸಿ ಮಾಡಿಕೊಂಡ ಕೇಸರಿ ಬೆರೆಸಿದ ಹಾಲನ್ನು ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಆಮೇಲೆ ಅನ್ನವನ್ನು ಮಿಕ್ಸ್ ಮಾಡಬೇಕು. ಎಲ್ಲವನ್ನೂ ಒಟ್ಟಿಗೆ ಸಣ್ಣ ಕುದಿ ಬರಿಸಿಕೊಂಡು ತುಪ್ಪ ಅಥವಾ ಬೆಣ್ಣೆ ಜೊತೆ ಸವಿಯಬಹುದು.
ಪ್ರತಿನಿತ್ಯ ಅನ್ನ, ದಾಲ್ ಅಥವಾ ಒಂದೇ ತರಹದ ತಿಂಡಿ ತಿಂದು ಬೇಜಾರಾದವರು ಖಂಡಿತಾ ಈ ರೆಸಿಪಿ ಟ್ರೈ ಮಾಡಿ. ಒಮ್ಮೆ ಮಾಡಿ ತಿಂದರೆ ಮತ್ತೆ ಮತ್ತೆ ಮಾಡಿಕೊಂಡು ತಿನ್ನುವ ಆಸೆ ಖಂಡಿತಾ ಆಗುತ್ತೆ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಹೋಟೆಲ್ ಸ್ಟೈಲ್‍ನಲ್ಲಿ ಆರೋಗ್ಯಕರವಾದ ಆಹಾರವನ್ನು ರೆಡಿ ಮಾಡಿಕೊಳ್ಳಬಹುದು.