ಕರಾವಳಿಯ ಬೆಡಗಿ ಸೋನಲ್ ಮೊಂತೆರೋ ಕೋಸ್ಟಲ್‌ವುಡ್ ನಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ತದನಂತರ ಸ್ಯಾಂಡಲ್ ವುಡ್ ನಲ್ಲಿ ಯೋಗರಾಜ್ ಭಟ್ ಅವರ ‘ಪಂಚತಂತ್ರ’ದಲ್ಲಿ ನಾಯಕಿಯಾಗಿ ಮಿಂಚಿದ್ರು.ಅಷ್ಟೇ ಅಲ್ಲ, ಸಾಲು ಸಾಲು ಕನ್ನಡ ಸಿನಿಮಾಗಳ ಜೊತೆಗೆ ಬಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದಾರೆ. ಈ ನಡುವೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ಸೋನಲ್ , ಅದರ ಮೂಲಕ ಚೊಚ್ಚಲ ವೆಬ್ ಸೀರೀಸ್ ಸಿದ್ಧಪಡಿಸಿದ್ದಾರೆ. ಆ ಮೂಲಕ ಹೊಸಹೆಜ್ಜೆ ಇರಿಸಿದ್ದಾರೆ.
ಹೌದು ಕೊರೊನಾ ಲಾಕ್‌ಡೌನ್ ಬಿಡುವಿನಲ್ಲಿ ಪ್ರೊಡಕ್ಷನ್ ಹೌಸ್ ಶುರು ಮಾಡುವ ಮೂಲಕ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.ಚರಣ್ ಸುವರ್ಣ ಮತ್ತು ಸೋನಲ್ ಸೇರಿ ‘ಸೋಚ್’ ಹೆಸರಿನ ಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಅದರ ಮೂಲಕ ಚೊಚ್ಚಲ ವೆಬ್‌ಸಿರೀಸ್ ಸಿದ್ಧಪಡಿಸಿದ್ದಾರೆ. ರವಿ ಶ್ಯಾಮನೂರ್ ಈ ವೆಬ್ ಸಿರೀಸ್‌ಗೆ ಬಂಡವಾಳ ಹೂಡಿದ್ದು, ಶೂಟಿಂಗ್ ಮುಕ್ತಾಯವಾಗಿದೆ.
ಸೈಕೊ ಥ್ರಿಲ್ಲರ್ ಕಥೆಯ ವೆಬ್‌ಸಿರೀಸನ್ನು ರಾಮ್ ತೇಜ್ ನಿರ್ದೇಶಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಕಿಶೋರ್ ಮತ್ತು ಶ್ರೀಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತೇಕ ಶೂಟಿಂಗ್ ಮಂಗಳೂರಿನಲ್ಲಿ ನಡೆದಿದೆ. 20 ನಿಮಿಷದ 6 ಎಪಿಸೋಡ್‌ಗಳು ಇದರಲ್ಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಆಗಸ್ಟ್ ಮೊದಲ ವಾರದಲ್ಲಿ ಹೊರತರುವ ಯೊಜನೆ ಇದೆ ಎನ್ನುತ್ತಾರೆ ಸೋನಲ್.
ಸೋನಾಲ್ ಮೊಂತೆರೊ ‘ಎಕ್ಕಸಕ’ ಸಿನಿಮಾದ ಮೂಲಕ ಕೋಸ್ಟಲ್‌ವುಡ್ ಪ್ರವೇಶಿಸಿ, ತುಳುವಿನಲ್ಲಿ ಮೂರು ಸಿನಿಮಾದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಒಂದು ವೇಳೆ ಕೊರೊನಾ ಹಾವಳಿ ಇರದಿದ್ದರೆ ಈ ವರ್ಷ ಇವರ ನಾಲ್ಕು ಸಿನಿಮಾಗಳು ತೆರೆಕಾಣಬೇಕಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’, ರಿಯಲ್‌ಸ್ಟಾರ್ ಉಪೆಂದ್ರ ಅಭಿನಯದ ‘ಬುದ್ಧಿವಂತ 2’, ‘ಬನಾರಸ್’ ಈ ವರ್ಷ ಬಿಡುಗಡೆ ಆಗಬೇಕಿತ್ತು. ಇದಲ್ಲದೆ ಪಂಜಾಬಿ ಭಾಷೆಯ ಚಿತ್ರವೊಂದರಲ್ಲಿ ಸೋನಲ್ ಗೆ ಆಫರ್ ಕೂಡ ಬಂದಿದೆಯಂತೆ. ಜತೆಗೆ ಹಿಂದಿ ವೆಬ್ ಸೀರಿಸ್ ಮಾಡುವ ಮಾತುಕತೆಯೂ ನಡೆದಿದೆಯಂತೆ.