ಬೆಳ್ತಂಗಡಿ: ಖಾಸಗಿ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಕರೆಗೆ ಹೆದರಿದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಹರ್ಷಿತ್ (19) ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹರ್ಷಿತ್ ನನ್ನು ಸಂಪರ್ಕಿಸಿದ ವ್ಯಕ್ತಿಯೋರ್ವಆತನೊಂದಿಗೆ ಚಾಟ್ ಮಾಡಿದ್ದ. ಜೊತೆಗೆ ಹರ್ಷಿತ್ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಹರ್ಷಿತ್ ಖಾಸಗಿ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ವಿಡಿಯೋ ವೈರಲ್ ಮಾಡಬಾರದು ಎಂದಾದರೆ ಹನ್ನೊಂದು ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಹಣ ಹೊಂದಿಸಲು ಹರ್ಷಿತ್ ಸಮಯಾವಾಕಾಶ ಕೇಳಿದ್ದಾನೆ. ಆದರೆ ಹರ್ಷಿತ್ ಗೆ ಹಣ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.