ಕಳೆದ ಕೆಲ ದಿನಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಭಾನುವಾರ ರಾತ್ರಿ ಮತ್ತೆ ಮಂಗಳೂರಿಗೆ ಬಂದಿಳಿದಿದ್ದಾರೆ. ಖಾಸಗಿ ಕಾರ್ಯಕ್ರಮ ಹಾಗೂ ಸಿನಿಮಾದ ಶೂಟಿಂಗ್ ಗಾಗಿ ತಲೈವ ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಜನಿಕಾಂತ್ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಏರ್ ಪೋರ್ಟ್ ಮುಂಭಾಗ ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದರು. ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿದ ರಜನಿಕಾಂತ್ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದರು.
ಸದ್ಯ ರಜನಿಕಾಂತ್ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಮಂಗಳೂರಿನ ಸುತ್ತ ಮುತ್ತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ರಜನಿ, ಮಂಗಳೂರಿನ ಹಲವು ದೇವಸ್ಥಾನಗಳಿಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ಜೈಲರ್ ಸಿನಿಮಾದ ಶೂಟಿಂಗ್ ನಡೆಯಲಿದೆ. ಶೂಟಿಂಗ್ ಮಧ್ಯೆ ಬಿಡುವು ಪಡೆದುಕೊಂಡು ಪ್ರಮುಖ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿಗಳು ಒಂದಾಗ್ತಿರೋದ್ರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇಂದು ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲು ನಟ ಶಿವರಾಜ್ ಕುಮಾರ್ ಕೂಡ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.