ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೆ ಸಾಕಷ್ಟು ಶೂಟಿಂಗ್ ಮುಗಿಸಿರುವ ರಜನಿಕಾಂತ್ ಇದೀಗ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿಳಿದಿದ್ದಾರೆ.
ಇಂದಿನಿಂದ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾದ ಶೂಟಿಂಗ್ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಚಿತ್ರತಂಡದೊಂದಿಗೆ ಇಂದು ರಜನಿಕಾಂತ್ ತುಳುನಾಡಿಗೆ ಆಗಮಿಸಿದ್ದಾರೆ. ಕರಾವಳಿಯ ಹಲವು ಭಾಗಗಳಲ್ಲಿ ‘ಜೈಲರ್’ ಸಿನಿಮಾದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.
ಜೈಲರ್ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯಲಿರುವ ಶೂಟಿಂಗ್ ನಲ್ಲಿ ಶಿವರಾಜ್ ಕುಮಾರ್ ಕೂಡ ಭಾಗಿಯಾಗಲಿದ್ದಾರೆ. ರಜನಿಕಾಂತ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಭಿಮಾನಿಗಳ ದಂಡೇ ನಟನನ್ನು ಸುತ್ತುವರೆದಿದೆ. ಹೀಗಾಗಿ ಶೂಟಿಂಗ್ ನಡೆಯುವ ಸ್ಥಳಗಳಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸಲಾಗುತ್ತಿದೆ.
ಜೈಲರ್ ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದ್ದು, ಇದೇ ಮೊದಲ ಬಾರಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಐಶ್ವರ್ಯ ರೈ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.