ನವದೆಹಲಿ : 2000ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯ ಕೆಂಪುಕೋಟೆಯ ಸೇನಾ ಬ್ಯಾರಕ್ ಮೇಲೆ ದಾಳಿ ನಡೆಸಿದ ಲಷ್ಕರ್-ಎ-ತೊಯ್ಬಾ ಸಂಘಟನಯ ಉಗ್ರಗಾಮಿ ಮೊಹಮ್ಮದ್ ಅಶ್ಫಾಕ್ ಆರಿಫ್ ಗೆ ನೀಡಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ಗುರುವಾರ ದೃಢಪಡಿಸಿದೆ.
ಸಿಜೆಐ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಆರೀಫ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು ಮರಣ ದಂಡನೆಯನ್ನು ಎತ್ತಿಹಿಡಿದಿದೆ. ಅಪರಾಧಿ ಮತ್ತು ಶಿಕ್ಷೆಯ ಆದೇಶವನ್ನು ಗಮನಿಸಿ ಯಾವುದೇ ಹಸ್ತಕ್ಷೇಪವನ್ನು ಮಾಡುವುದಿಲ್ಲ ಎಂದು ಮುಖ್ಯ ನ್ಯಾ. ಯು.ಯು ಲಲಿತ್ ತಿಳಿಸಿದ್ದಾರೆ.
ಡಿಸೆಂಬರ್ 22, 2000 ರಂದು ಕೆಂಪು ಕೋಟೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು ಮೂರು ಮಂದಿ ಮೃತಪಟ್ಟಿದ್ದರು. ದಾಳಿಯಲ್ಲಿ ಸಿಕ್ಕಿ ಬಿದ್ದ ಆರೀಫ್ ಗೆ ಆಗಸ್ಟ್ 10, 2011 ರಂದು, ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2005 ರಲ್ಲಿ ಸೆಷನ್ಸ್ ನ್ಯಾಯಾಲಯವು ಆತನಿಗೆ ನೀಡಿದ್ದ ಮರಣದಂಡನೆ ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದನ್ನು ದೆಹಲಿ ಹೈಕೋರ್ಟ್ ದೃಢೀಕರಿಸಿತ್ತು. ಆದರೆ 2014ರಲ್ಲಿ ಆರೀಫ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.