ವಾಣಿಜ್ಯ ಜಾಹಿರಾತು

ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಎಲ್ಲಾ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಅಂಗಸಂಸ್ಥೆಗಳನ್ನು ನಿಷೇಧಿಸಿದೆ. ಈ ಮೂಲಕ ಈ ಸಂಘಟನೆಯನ್ನು ಕಾನೂನು ಬಾಹಿರ  ಎಂದು ಘೋಷಿಸಿದೆ. ಇದರೊಂದಿಗೆ ಯುಎಪಿಎ ಸೆಕ್ಷನ್ 35ರ ಅಡಿಯಲ್ಲಿ 42 ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಪಿಎಫ್ ಐ ಸಂಘಟನೆ ಸೇರ್ಪಡೆಯಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, PFI ನ ಸಹವರ್ತಿ ಸಂಸ್ಥೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO) , ನ್ಯಾಷನಲ್ ವುಮೆನ್ಸ್ ಫ್ರಂಟ್ (NWF), ಜೂನಿಯರ್ ಫ್ರಂಟ್ (JF) , ಎಂಪವರ್ ಇಂಡಿಯಾ ಫೌಂಡೇಶನ್(EIF) ಹಾಗೂ ರೆಹಬ್ ಫೌಂಡೇಶನ್ ಸಂಘಟನೆಗಳನ್ನು ಸಹ ನಿಷೇಧಿಸಲಾಗಿದೆ.

ಏಳು ರಾಜ್ಯಗಳಾದ್ಯಂತ ನಡೆದ ಸರಣಿ ದಾಳಿಯಲ್ಲಿ ಪಿಎಫ್ ಐ ಗೆ ಸಂಬಂಧಿಸಿದ 270 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಒಂದು ದಿನದ ನಂತರ ಈ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕದ ಪೊಲೀಸರು ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಪಿಎಫ್ ಐ ಮತ್ತು ಅದರ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದ 80 ಕ್ಕೂ ಹೆಚ್ಚು ಸದಸ್ಯರನ್ನು “ಮುನ್ನೆಚ್ಚರಿಕೆ ಕ್ರಮವಾಗಿ” ಬಂಧಿಸಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ಮಧ್ಯಪ್ರದೇಶ ಮತ್ತು ಯುಪಿಯಲ್ಲೂ ದಾಳಿ ನಡೆಸಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅಂಗಸಂಸ್ಥೆಗಳನ್ನು ದೇಶದ ಹೊರಗಿನಿಂದ ನಿಯಂತ್ರಿಸಲಾಗಿರುವುದರಿಂದ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿದೆ ಎನ್ನುವ ಮೂಲಕ ನಿರ್ಧಾರವನ್ನು ಸ್ವಾಗತಿಸಿದರು.

ಪಿಎಫ್ ಐ ಸಾಕಷ್ಟು ದೇಶವಿರೋಧಿ ಚಟುವಟಿಕೆ ಹಾಗೂ ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡಿದೆ. ದೇಶದ ಹೊರಗಿನಿಂದ ಈ ಸಂಘಟನೆಯನ್ನು ನಿಯಂತ್ರಿಸುತ್ತಿದ್ದು, ಅನೇಕ ಪ್ರಮುಖ ಪದಾಧಿಕಾರಿಗಳು ಗಡಿಯುದ್ದಕ್ಕೂ ಹೋಗಿ ತಮ್ಮದೇ ಆದ ತರಬೇತಿಯನ್ನು ಪಡೆದು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈಗ  ಈ ಸಂಘಟನೆಯನ್ನು ನಿಷೇಧಿಸುವ ಸಮಯ ಬಂದಿದೆ ಎಂದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.