ಉಡುಪಿ :ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮೀನುಗಾರಿಕೆಯಲ್ಲಿ 3ನೇ ಸ್ಥಾನದಲ್ಲಿದೆ, ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅದನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ ಇದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಜುಲೈ ೮ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮತ್ತು ಹಂಗಾರಕಟ್ಟೆ- ಕೋಡಿಬೆಂಗ್ರೆ ಯಾಂತ್ರಿಕೃತ ಮೀನುಗಾರರ ಸಂಘದ ಆಶ್ರಯದಲ್ಲಿ ನಡೆದ ಬೋಟ್ ಮಾಲಕರಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೊನ ಹೊಡೆತದಿಂದ ಪರವೂರಿನಲ್ಲಿರುವ ಸಾವಿರಾರು ಮಂದಿ ಮೀನುಗಾರರು ಉದ್ಯೋಗವಿಲ್ಲದೆ ಹುಟ್ಟೂರಿನ ಕಡೆಗೆ ಆಗಮಿಸುತ್ತಿದ್ದಾರೆ. ಇಂಥವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪಂಜರ ಮೀನು ಸಾಕಾಣಿಕೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಇಲಾಖೆಯ ಮುಂದಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಹಾಗೂ ಜನವರಿಯಿಂದ ಮಾರ್ಚ್‍ವರೆಗಿನ ಮೀನುಗಾರಿಕೆ ಡಿಸೇಲ್ ಸಬ್ಸಿಡಿ ಬಿಡುಗಡೆಗೊಂಡಿದೆ ಎಂದರು.
ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿಯ ಅಳಿವೆಯಲ್ಲಿ ಹೂಳು ಶೇಖರಣೆಯಾಗಿದ್ದು, ಬೋಟ್‍ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಇದನ್ನು ತೆರವುಗೊಳಿಸಲು ತಗಲುವ ಮೊತ್ತದ ಅಂದಾಜು ಪಟ್ಟಿಯನ್ನು ಈಗಾಗಲೇ ರವಾನಿಸಿದ್ದು ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಚಿವರಿಗೆ ಯಶ್‍ಪಾಲ್ ಸುವರ್ಣ ಹಾಗೂ ಬಿ ಬಿ ಕಾಂಚನ್ ಸಚಿವರಿಗೆ ಈ ಸಂದರ್ಭ ಮನವಿ ಮಾಡಿದರು.