ಆಂಧ್ರ ಪ್ರದೇಶ: ಕಳ್ಳರು ನಾನಾ ರೀತಿಯ ಚಾಲಾಕಿತನ ಮೆರೆದು ಕಳ್ಳತನ ಮಾಡಿರುವುದನ್ನು ಕೇಳಿದ್ದೇವೆ. ಒಂದಷ್ಟು ಕಳ್ಳರು ತಮ್ಮ ಪ್ರಯತ್ನದಲ್ಲಿ ವಿಫಲರಾಗಿರುವ ಬಗ್ಗೆಯೂ ಕೇಳಿದ್ದೇವೆ. ಆದರೆ ಇಲ್ಲೋರ್ವ ಕಳ್ಳ ಕಳ್ಳತನಗೈದು ವಾಪಾಸ್ಸು ತೆರಳಲು ಸಾಧ್ಯವಾಗದೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಘಟನೆಯ ವಿಡಿಯೋವನ್ನು ಪತ್ರಕರ್ತ ಸೂರ್ಯ ರೆಡ್ಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
A burglar trapped in the act at Jhadupudi Jami Yellamma #Temple in Kanchili mandal of Srikakulam dist. Enters through a small ventilation window, but just couldn't get out.#AndhraPradesh #Kanchili #Jhadupudi #Srikakulam #Burglar #Funny #JamiYellammaTemple pic.twitter.com/XF6SGG9LYI
— Surya Reddy (@jsuryareddy) April 5, 2022
ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಶ್ರೀಕಾಕುಳಂನ ಜಾಮಿ ಯೆಲ್ಲಮ್ಮ ದೇವಸ್ಥಾನದಲ್ಲಿ . ಈ ದೇವಸ್ಥಾನಕ್ಕೆ ಕಳ್ಳತನಕ್ಕೆಂದು ಬಂದ ಖದೀಮನೊಬ್ಬ ದೇವಳದ ಗೋಡೆಯಲ್ಲಿದ್ದ ಸಣ್ಣ ರಂಧ್ರದ ಮೂಲಕ ಒಳಪ್ರವೇಶಿಸಿ ಬೆಳ್ಳಿಯ ಆಭರಣ ಕಳವುಗೈದಿದ್ದಾನೆ. ಆದರೆ ಅವನ ದುರಾದೃಷ್ಟ ಅದೇ ಕಿಂಡಿಯ ಮೂಲಕ ವಾಪಾಸ್ಸಾಗುವಾಗ ಕಿಂಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಹೇಗೇ ಪ್ರಯತ್ನಪಟ್ಟರೂ ಕಿಂಡಿಯಿಂದ ಹೊರಬರಲಾಗದೇ ಅಲ್ಲೇ ಒದ್ದಾಡಿದ್ದಾನೆ. ಇವನ ಬೊಬ್ಬೆ ಕೇಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.
ಆರೋಪಿಯ ಹೆಸರು ಪಾಪ ರಾವ್. ಈತ ಮದ್ಯದ ಚಟ ಹೊಂದಿದ್ದು ಈ ಹಿಂದೆಯೂಮದ್ಯ ಸೇವಿಸುವ ಸಲುವಾಗಿ ತನ್ನ ತಾಯಿಯ ಮನೆಯಿಂದ ಎಲ್‌ಪಿಜಿ ಸಿಲಿಂಡರ್ ಅನ್ನು ಕದ್ದಿದ್ದ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ದೇವಳದಿಂದ ಕಳ್ಳತನವಾದ ಬೆಳ್ಳಿಯ ಆಭರಣಗಳನ್ನು ಈತನಿಂದ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮಾರು 20 ಗ್ರಾಂ ತೂಕದ ಬೆಳ್ಳಿಯ ಆಭರಣ ಕದ್ದೊಯ್ಯಲು ಪ್ರಯತ್ನಿಸುವ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.