ವಾಣಿಜ್ಯ ಜಾಹಿರಾತು

ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿರುವ ಹಾಡು ‘ಕಚ್ಚಾ ಬಾದಾಮ್’. ಬಹುಷಃ ಈ ಹಾಡು ಕೇಳದವರೂ, ಹಾಡಿಗೆ ಹೆಜ್ಜೆ ಹಾಕದವರೂ ಇರಲಿಕ್ಕಿಲ್ಲ. ಜಗತ್ತಿನಾದ್ಯಂತ ಅಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಇದು. ಆದರೆ ಹೆಚ್ಚಿನವರಿಗೆ ಈ ಹಾಡು ಹುಟ್ಟಿದ್ದೇಗೆ ಅನ್ನೋದು ಗೊತ್ತಿಲ್ಲ. ಈ ಹಾಡಿನ ಮೂಲದ ಬಗ್ಗೆ ಗೊತ್ತಿಲ್ಲ. ಈ ಹಾಡಿನ ಬಗೆಗಿನ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ನೋಡಿ.

ಕಚ್ಚಾ ಬಾದಾಮ್ ಹಾಡು ಮೊದಲು ಹಾಡಿದವರು ಪಶ್ಚಿಮ ಬಂಗಾಳದ ಭುವನ್ ಬದ್ಯಕರ್ ಎಂಬವರು. ಬೀರ್ಭೌಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ನ ಕುರಲ್ಜುರಿ ಗ್ರಾಮದ ನಿವಾಸಿಯಾಗಿರುವ ಭುವನ್ ಬದ್ಯಕರ್ ಕಡಲೆಕಾಯಿ ವ್ಯಾಪಾರಿ. ಕಡಲೆಕಾಯಿಗೆ ಬಂಗಾಳಿಯಲ್ಲಿ ಕಚ್ಚಾ ಬಾದಾಮ್ ಎಂದು ಹೇಳಲಾಗುತ್ತದೆ. ಇವರು ಕಡಲೆಕಾಯಿ ಮಾರಾಟ ಮಾಡಲು ಒಂದು ಟ್ರಿಕ್ಸ್ ಬಳಸಿದ್ದರು. ಹಣ ಮಾತ್ರವಲ್ಲ ಯಾವುದೇ ವಸ್ತುಗಳನ್ನು ನೀಡಿದರೂ ಅದಕ್ಕೆ ಪ್ರತಿಯಾಗಿ ಕಡಲೆಕಾಯಿ ಮಾರಾಟ ಮಾಡುತ್ತಾರೆ ಭುವನ್. ತಾನು ಬಂದಾಗ ಎಲ್ಲರಿಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ತಾನೇ ಒಂದು ಜಿಂಗಲ್( ಪ್ರಚಾರಕ್ಕಾಗಿ ಒಂದು ಚಿಕ್ಕ ಹಾಡು) ಸಿದ್ಧಮಾಡಿದ್ದರು. ಅದೇ ಹಾಡು ಮುಂದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ ಅನ್ನೋದನ್ನು ಅವರೂ ಊಹಿಸಿರಲಿಕ್ಕೂ ಸಾಧ್ಯವಿಲ್ಲ! ಹೌದು, ಅಂದು ಕಡಲೆಕಾಯಿ ಮಾರಾಟ ಮಾಡಲು ಸಿದ್ಧಪಡಿಸಿದ ಹಾಡೇ ‘ಕಚ್ಚಾ ಬಾದಾಮ್’!

ಹೆಚ್ಚಿನವರು ಕಚ್ಚಾ ಬಾದಾಮ್ ಅಂದರೆ ಬಾದಾಮಿ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಬಾದಾಮಿ ಅಲ್ಲ, ಕಡಲೆಕಾಯಿ. ಬಡ್ಯಾಕರ್ ಅವರು ಹತ್ತಿರದ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡಲು ತೆರಳುತ್ತಾರೆ. ಬಳೆಗಳು, ಮೊಬೈಲ್, ಇತರ ಬೆಲೆಬಾಳುವ ವಸ್ತುಗಳಿಗೆ ಬದಲಾಗಿ ಕಡಲೆಕಾಯಿಯನ್ನು ತೂಕದಲ್ಲಿ ಮಾರಾಟ ಮಾಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಾಗೂ ತಾನು ಬಂದಿರುವುದನ್ನು ತಿಳಿಯಪಡಿಸಲು ಈ ಹಾಡನ್ನು ಅವರೇ ರಚಿಸಿದ್ದಂತೆ! ಕಚಾ ಬದಮ್ ಹಾಡನ್ನು ಮೊದಲು ಸೆರೆಹಿಡಿದು ಯೂಟ್ಯೂಬ್‌ನಲ್ಲಿ ‘ಏಕ್ತಾರಾ’ ಎಂಬ ಚಾನೆಲ್ ಶೇರ್ ಮಾಡಿದೆ.ಇದು 2 ತಿಂಗಳ ಅವಧಿಯಲ್ಲಿ, 21 ಮಿಲಿಯನ್ ವೀಕ್ಷಣೆ ಗಳಿಸಿತು.

ಯೂಟ್ಯೂಬ್‌ನಲ್ಲಿ ಕಚಾ ಬಾದಮ್ ಹಾಡು ವೈರಲ್ ಆಗಿ ಇನ್‌ಸ್ಟಾಗ್ರಾಮ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹರಡಿತು. ನಂತರ ಗಾಯಕ , ಸಂಗೀತಗಾರ ನಜ್ಮು ರೀಚತ್ ಅವರು ಬಡ್ಯಾಕರ್ ಅವರ ಟ್ಯೂನ್‌ಗಳಿಂದ ಪೆಪ್ಪಿ ರೀಮಿಕ್ಸ್ ರಚಿಸಿದರು. ನಂತರದ್ದು ಎಲ್ಲಾ ಇತಿಹಾಸ!
ಈ ಹಾಡು ವೈರಲ್ ಆದ ಒಂದೇ ತಿಂಗಳಿನಲ್ಲಿ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದರ ರಿಮಿಕ್ಸ್ ಹಾಡು ಮತ್ತಷ್ಟು ವೈರಲ್ ಆಗಿ ಲಕ್ಷಾಂತರ ಕೋಟ್ಯಾಂತರ ಜನ ಆಕರ್ಷಿತರಾಗಿದ್ದಾರೆ. ಈ ಆಕರ್ಷಕ ಹಾಡಿನ ಬೀಟ್‌ಗಳಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿ, ಪ್ರಭಾವಿಗಳೂ ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದಾರೆ. ನೃತ್ಯ ಸಂಯೋಜಕರು ಹೊಸ ಹೊಸ ರೀತಿಯಲ್ಲಿ ನೃತ್ಯ ಸಂಯೋಜಿಸಿದ್ದಾರೆ.
ಭುವನ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದು, ಕಡಲೆಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಾಡು ಖ್ಯಾತಿ ಪಡೆದ ನಂತರ ಹೆಚ್ಚು ಕಡಲೆಕಾಯಿ ವ್ಯಾಪಾರವಾಗುತ್ತಿದೆಯಂತೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಭುವನ ಹೇಳಿಕೊಂಡಿದ್ದಾರೆ.
ನನ್ನ ಹಾಡಿನ ಬಗ್ಗೆ ಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ನನ್ನ ಕುಟುಂಬಕ್ಕೆ ಕೆಲವು ಶಾಶ್ವತ ಜೀವನ ವ್ಯವಸ್ಥೆಗಳನ್ನು ಮಾಡಲು ಸರ್ಕಾರವು ಸ್ವಲ್ಪ ಹಣವನ್ನು ಸಹಾಯ ಮಾಡಬೇಕೆಂದು ನಾನು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಡಲೆಕಾಯಿ ವ್ಯಾಪಾರಿ ರಚಿಸಿದ ಹಾಡೊಂದು ಇಷ್ಟರಮಟ್ಟಿಗೆ ಜನಪ್ರಿಯತೆ ಪಡೆಯಬಹುದು ಎಂಬುದು ಯಾರೂ ಊಹಿಸಿರಲಿಕ್ಕೂ ಇಲ್ಲ.ಅತೀ ಹೆಚ್ಚು ವೈರಲ್ ಆದ ಹಾಡುಗಳ ಪಟ್ಟಿಯಲ್ಲಿ ಕಚ್ಚಾ ಬಾದಾಮ್ ಕೂಡ ಒಂದು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.