ತುಳುನಾಡಿನ ಪ್ರತಿಭೆ ನಟ ರೂಪೇಶ್ ಶೆಟ್ಟಿ ಸದ್ಯ ಬಿಗ್ ಬಾಸ್ ನಲ್ಲಿ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ರೂಪೇಶ್ ಶೆಟ್ಟಿ ಇದೀಗ ಟಿವಿ ಸೀಸನ್ ನಲ್ಲೂ ಕಮಾಲ್ ಮಾಡ್ತಿದ್ದಾರೆ. ಆದರೆ ರೂಪೇಶ್ ಶೆಟ್ಟಿ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು ಅವರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಕೀಳು ಮಟ್ಟದ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ರೂಪೇಶ್ ಶೆಟ್ಟಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಬಿಗ್ ಬಾಸ್ ಸೀಸನ್ 9ರಲ್ಲಿ ಇತ್ತೀಚೆಗಷ್ಟೇ ಪ್ರಶಾಂತ್ ಸಂಬರ್ಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದರು ಎಂಬ ಕಾರಣಕ್ಕೆ ಉಗ್ರ ಹೋರಾಟ ಮಾಡಿದ್ದರು. ಬಳಿಕ ಪ್ರಶಾಂತ್ ಸಂಬರ್ಗಿ ಕ್ಷಮೆ ಯಾಚಿಸಿದ್ದರು. ಇದೀಗ ರೂಪೇಶ್ ಶೆಟ್ಟಿ ನಾನು ಗಡಿನಾಡ ಕನ್ನಡಿಗ ಎಂದು ಹೇಳಿದ್ದು ಇದು ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್, ನಾನು ಗಡಿನಾಡ ಕನ್ನಡಿಗ ಅಂತ ಹೇಳಿ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ ಇದು ಕೆಲ ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಸಾಕಷ್ಟು ಮಂದಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಾಕಷ್ಟು ತುಳು ಜನರು ರೂಪೇಶ್ ಶೆಟ್ಟಿ ಬೆಂಬಲಕ್ಕೆ ನಿಂತರೆ ಮತ್ತೆ ಕೆಲವರು ರೂಪೇಶ್ ವಿರುದ್ದ ಕಿಡಿ ಕಾರಿದ್ದಾರೆ. ಅಲ್ಲದೆ ರೂಪೇಶ್ ಬಗ್ಗೆ ಸಾಮಾಜಿಕ ಜಾಲಾ ತಾಣದಲ್ಲಿ ಕೆಟ್ಟದಾಗಿ ಬರೆದು ಅಸಮಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ರೂಪೇಶ್ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೂಪೇಶ್ ಪೋಷಕರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ದೂರು ನೀಡಿದ್ದಾರೆ.
ನಾನು ಕಲಿತದ್ದು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ಆದರೆ ನಾನು ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ’ ಎಂದು ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು.
ರೂಪೇಶ್ ಶೆಟ್ಟಿ ಮೊದಲಿನಿಂದಲೂ ತುಳುವ ಎಂಥಲೆ ಗುರುತಿಸಿಕೊಂಡಿರುವುದು. ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಆರಂಭದಿಂದಲೂ, ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಲು ತುಳುವ ಎಂಥಲೆ ಗುರುತಿಸಿಕೊಂಡಿದ್ದ ರೂಪೇಶ್ ಶೆಟ್ಟಿ ಇದೀಗ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ರೂಪೇಶ್ ಶೆಟ್ಟಿಯನ್ನ ಗಡಿನಾಡಿಗೆ ಓಡಿಸಬೇಕು ಅಂತ ಪೋಸ್ಟ್ ಹಾಕಲಾಗಿದೆ. ಇದೀಗ ಕಿಡಿಗೇಡಿಗಳಿಂದ ಬೆದರಿಕೆ ಬಂದ ಬೆನ್ನಲ್ಲೇ ಸೈಬರ್ ಠಾಣೆಯಲ್ಲಿ ರೂಪೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.