ಮೂಡುಬಿದಿರೆ: ತಾಲೂಕಿನ ತೋಡಾರು ಗ್ರಾಮದಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬ್ರಹ್ಮಶ್ರೀ ಬೈದರ್ಕಳ ಗರಡಿಯ ಜಾತ್ರೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಕ್ಷೇತ್ರದಲ್ಲಿ ‘ತುಡರಾಯನ ಪಂಥೊಲು’ ಸಾಂಸ್ಕೃತಿಕ ಸ್ಪರ್ಧಾಕೂಟ ಆಯೋಜನೆ ಮಾಡಲಾಗಿದೆ. ಡಿ. 4 ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.
ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಊರ ಪರವೂರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಆಶಯದೊಂದಿಗೆ ಧಾರ್ಮಿಕತೆಯ ಅರಿವನ್ನು ಪಸರಿಸುವ ಚಟುವಟಿಕೆಗಳನ್ನು ಸ್ಪರ್ಧೆ ರೂಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಕ್ತಿಗೀತೆ, ಭಜನೆ, ಚಿತ್ರಕಲೆ, ರಂಗೋಲಿ ಆಶುಭಾಷಣ, ರಸಪ್ರಶ್ನೆ, ಹೂಕಟ್ಟುವುದು, ಶಂಖ ಊದುವುದು, ಜ್ಞಾಪಕ ಶಕ್ತಿ ಮತ್ತು ದೇವರ ನಾಮ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಿರಿಯರು, ಹಿರಿಯರು ಮತ್ತು ಮಹಿಳೆಯರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತಂಡಗಳಾಗಿ ಇಲ್ಲವೇ ವೈಯಕ್ತಿಕ ನೆಲೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ನ.30ರೊಳಗೆ 9945912997 ಅಥವಾ 8088469491 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಈ ಪೈಕಿ ಭಜನೆ ಮತ್ತು ಭಕ್ತಿಗೀತೆ ಸ್ಪರ್ಧೆಗೆ ಭಾಗವಹಿಸಲು ಇಚ್ಛಿಸುವವ ಸ್ಪರ್ಧಿ ಅಥವಾ ತಂಡಗಳು ತಮ್ಮ ಆಯ್ಕೆಯ ಯಾವುದೇ ಭಕ್ತಿಗೀತೆ ಮತ್ತು ಭಜನೆ ಯನ್ನು ತಮ್ಮ ಹೆಸರು, ಸ್ಪರ್ಧಾ ವಿಭಾಗ ಮತ್ತು ತಂಡದ ಹೆಸರನ್ನು ಉಲ್ಲೇಖಿಸಿ 5 ನಿಮಿಷಗಳಿಗೆ ಮೀರದಂತೆ ವಿಡಿಯೋ ಮಾಡಿ ನ.20 ರೊಳಗಾಗಿ ವಾಟ್ಸ್ಯಾಪ್ ಮಾಡುವುದು. ಭಕ್ತಿಗೀತೆ, ಭಜನೆಗಳ ವಿಡಿಯೋ ಕಳುಹಿಸಬೇಕಾದ ಸಂಖ್ಯೆ 9110270949 .
ಆಯ್ಕೆಯಾದ ಸ್ಪರ್ಧಿಗಳಿಗೆ ಡಿ.4ರಂದು ಶ್ರೀ ಕ್ಷೇತ್ರ ತೋಡಾರಿನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿರುವುದು ಎಂದು ಆಯೋಜಕರು ತಿಳಿಸಿದ್ದಾರೆ. ಉಳಿದಂತೆ ಎಲ್ಲಾ ಸ್ಪರ್ಧೆಗಳು ಡಿ.4 ಭಾನುವಾರದಂದೇ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಯಾ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತಿಯ ಸ್ಥಾನಿಯಾದವರಿಗೆ ಸ್ಮರಣಿಕೆ, ನಗದು ಬಹುಮಾನ ಪುರಸ್ಕಾರವಾಗಿ ನೀಡಲಾಗುವುದು. ಎಲ್ಲಾ ಸ್ಪರ್ಧೆಗಳಲ್ಲಿ ಆಯಾ ತಂಡದ ವಿಜೇತ ಸದಸ್ಯರು ಗಳಿಸುವ ಒಟ್ಟು ಅಂಕಗಳ ಆಧಾರದಲ್ಲಿ ಆಕರ್ಷಕ ನಗದು ಪುರಸ್ಕಾರವನ್ನೊಳಗೊಂಡ ಸಮಗ್ರತಂಡ ಪ್ರಶಸ್ತಿಯನ್ನು ಕೂಡ ಕೊಡಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.