ಉಡುಪಿ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಭಾರತೀಯ ಜನತಾ ಪಕ್ಷ ತನ್ನ ಜಿಲ್ಲಾ ಕಚೇರಿಯಲ್ಲಿ ನುಡಿನಮನ ಆಯೋಜಿಸುವುದರೊಂದಿಗೆ ಅಗಲಿದ ನಾಯಕನಿಗೆ ಶೃದ್ಧಾಂಜಲಿ ಸಲ್ಲಿಸಿತು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಆಯೋಜನೆಯಾದ ನುಡಿ ನಮನ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿ ನಾಯಕರು ಆಸ್ಕರ್ ಫೆರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಆಸ್ಕರ್ ಫೆರ್ನಾಂಡಿಸ್ ಅವರು ನಮ್ಮ ವಿರೋಧ ಪಕ್ಷದವರಾದರೂ ಕೂಡ ಅವರು ಉಡುಪಿಗೆ ನೀಡಿದ ಸೇವೆ ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಆಸ್ಕರ್ ಅವರು ಕಾರ್ಮಿಕ ಸಂಘಟನೆಗಳ ಮೂಲಕ ಬೆಳೆದು ಬಂದವರಾಗಿದ್ದು ಯಾವತ್ತೂ ಕೂಡ ಹಗೆ ರಾಜಕೀಯ ಮಾಡಿದವರಲ್ಲ. ಡಾ. ವಿ ಎಸ್ ಆಚಾರ್ಯ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಯಾವತ್ತೂ ಸಣ್ಣಬುದ್ದಿಯನ್ನು ಪ್ರದರ್ಶಿಸಿದವರಲ್ಲ ಎಂದರು.
ಆಸ್ಕರ್ ಒರ್ವ ಮಾನವೀಯ ಗುಣ ಇರುವ ನಾಯಕರಾಗಿದ್ದು ನನ್ನ ವೈಯಕ್ತಿಕ ಜೀವನದಲ್ಲಿ ದುರ್ಘಟನೆ ಆದಾಗ ಕೂಡ ನನಗೆ ಸಾಂತ್ವನ ಹೇಳಿದ್ದರು. ಕಾಂಗ್ರೆಸ್ ಪಕ್ಷದವರು ನನ್ನನ್ನು ಟೀಕಿಸಿದಾಗಲೂ ಕೂಡ ನನ್ನ ಮೇಲೆ ಮಾನವೀಯ ಗುಣ ತೋರಿದ್ದಲ್ಲದೆ ನಾನು ಮಾನಸಿಕ ವೇದನೆಯಲ್ಲಿ ಇದ್ದಾಗ ಸಾಂತ್ವನ ಮಾಡಿದ್ದರು. ಏನೇ ಸಹಾಯ ಬೇಕಾದರೆ ಕೇಳಿ ಎಂದಿದ್ದರು. ಅಂದು ಅವರು ಅವರ ಸಹಾಯಕ್ಕಿಂತಲೂ ಸಾಂತ್ವನದಿಂದ ನಾನು ಹಗುರಾಗಿದ್ದೆ ಅಂತಹ ಅತ್ಯಂತ ಒಳ್ಳೆಯ ಗುಣ ಹೊಂದಿದ್ದರು. ಆದ್ದರಿಂದಲೇ ನಾನು ಬೆಂಗಳೂರುನಿಂದ ಬಂದು ಅವರ ಅಂತಿಮ ದರ್ಶನ ಪಡೆದೆ ಎಂದರು.
ಈ ವೇಳೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಮಹಿಳಾ ಬಿಜೆಪಿ ಅಧ್ಯಕ್ಷೆ ವೀಣಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.