ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ತುಲಿಕಾ ಮಾನ್ ಮಹಿಳಾ ಜೂಡೋ 78 ಕೆ ಜಿ ವಿಭಾಗದಲ್ಲಿ ಬೆಳ್ಳಿಪದಕ ಜಯಿಸಿದ್ದು, ಈ ಮೂಲಕ ಜೂಡೋದಲ್ಲಿ ಭಾರತಕ್ಕೆ ಒಲಿದ ಮೂರನೇ ಪದಕವಾಗಿದೆ. ಸೋಮವಾರ ನಡೆದ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಎಲ್ ಶುಶೀಲಾ ದೇವಿ ಮತ್ತು 60 ಕೆಜಿ ಪುರುಷರ ವಿಭಾಗದಲ್ಲಿ ವಿಜಯ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.
ಫೈನಲ್ ನಲ್ಲಿ ಸ್ಕಾಟ್ ಲ್ಯಾಂಡ್ ನ ಸಾರಾ ಆಡ್ಲಿಂಗ್ಟನ್ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳುವಂತಾಯ್ತು.
ಇದರೊಂದಿಗೆ 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಅಥ್ಲೀಟ್‌ಗಳು 18 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಐದು ಚಿನ್ನ, ಆರು ಬೆಳ್ಳಿ ಮತ್ತು ಏಳು ಕಂಚು ಗೆದ್ದಿದ್ದಾರೆ. ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡ ಸಂಕೇತ್ ಸರ್ಗರ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಮೀರಾಬಾಯಿ ಚಾನು CWG 2022 ರಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಪದಕಗಳ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.
ಜುಲೈ 28 ರಿಂದ ಆಗಸ್ಟ್ 8 ರವರೆಗೆ, ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಸುಮಾರು 200 ಭಾರತೀಯ ಕ್ರೀಡಾಪಟುಗಳು 16 ವಿವಿಧ ಕ್ರೀಡೆಗಳಲ್ಲಿ ಪದಕಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ.