ಮಸ್ಕತ್: ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ ಈಗಾಗೇ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸಿದ್ದಾರೆ. ಈಗಾಗ್ಲೆ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿರುವ ಶಿವದೂತ ಗುಳಿಗೆ ನಾಟಕವು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ.
ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಪೂಜ್ಯ ಪುತ್ತಿಗೆ ಮಠಾದೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಸ್ಕತ್ ಗೆ ಆಗಮಿಸಿದ್ದು, ಈ ಸಂಧರ್ಭದಲ್ಲಿ ಶ್ರೀಗಳ ಸಾನಿಧ್ಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಶ್ರೀಗಳು ಮಸ್ಕತ್ ನ ಶ್ರೀ ಕೃಷ್ಣ ದೇವಸ್ಥಾನ ದಾರ್ಸೈಟ್ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಇದೇ ವೇಳೆ ಮಾತನಾಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, “ತುಳುನಾಡಿನ ದೈವ ದೇವರುಗಳ ಕಥೆಯನ್ನು ಒಳಗೊಂಡ ಶಿವದೂತೆ ಗುಳಿಗೆ ನಾಟಕವನ್ನು ಮಸ್ಕತ್ ನಲ್ಲಿ ಇರುವ ಎಲ್ಲಾ ತುಳು ಕನ್ನಡಿಗರು ನೋಡಲೇಬೇಕು. ವಿಶೇಷವಾಗಿ ಈ ನಾಟಕವನ್ನು ನಮ್ಮ ಮಕ್ಕಳಿಗೆ ತೋರಿಸಿ ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಂತಹ ಪ್ರಯತ್ನ ಆಗಬೇಕು ಎಂದರು.
ಈಗಾಗಲೇ ಕರ್ನಾಟಕ, ಮುಂಬೈ ಮತ್ತು ಕೇರಳದ ಗಡಿನಾಡಿನಲ್ಲಿ 400 ಕ್ಕೂ ಅಧಿಕ ಪ್ರದರ್ಶನಗೊಂಡ ಶಿವದೂತೆ ಗುಳಿಗೆ ನಾಟಕವನ್ನು ಮಸ್ಕತ್ ನಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ನಾಟಕಕ್ಕೆ ಶುಭ ಹಾರೈಸಿದರು.