ನವದೆಹಲಿ: ಇನ್ನೇನು ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ತುಳುಭಾಷಿಕರಿಗೆ ತೀರಾ ನೋವುಂಟು ಮಾಡಿರುವ ಹೇಳಿಕೆ ಇದು. ಮಂಗಳವಾರ ಲೋಕಸಭೆಯಲ್ಲಿ ಕಾಸರಗೋಡು ಕ್ಷೇತ್ರದ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು, ‘ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಯೋಜನೆ ಸರಕಾರಕ್ಕಿದೆಯೇ, ಇಲ್ಲವಾದರೆ ಕಾರಣ ಏನು’ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಸದ್ಯ ತುಳುಭಾಷೆ ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರ್ಪಡೆಗೊಳ್ಳುವ ಸಾಧ್ಯತೆಯಿಲ್ಲ ಎಂದು ಉತ್ತರಿಸಿದ್ದಾರೆ.
ತುಳು ಭಾಷೆಗೂ ಅಧಿಕೃತ ಸ್ಥಾನಮಾನಕ್ಕಾಗಿ ಆಗ್ರಹವಿರುವುದು ಸರಕಾರದ ಗಮನದಲ್ಲಿದೆ. ಆದರೆ ಅಧಿಕೃತ ಭಾಷೆಗಳ ಸಂಖ್ಯೆಯನ್ನು ಪ್ರಸ್ತುತ ಹೆಚ್ಚಿಸುವುದು ಆಡಳಿತಾತ್ಮಕವಾಗಿ ಕಾರ್ಯಸಾಧ್ಯವಲ್ಲ. ಭಾಷೆಗಳು ಮತ್ತು ಉಪಭಾಷೆಗಳ ವಿಕಾಸ ಒಂದು ಸತತ ಪ್ರಕ್ರಿಯೆಯಾಗಿದ್ದು, ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗುತ್ತದೆ. ಆದ್ದರಿಂದ ಭಾಷೆಗಳನ್ನು ಉಪಭಾಷೆಗಳಿಂದ ಪ್ರತ್ಯೇಕವಾಗಿ ಗುರುತಿಸಲು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಲು ಮಾನದಂಡಗಳನ್ನು ನಿರ್ದಿಷ್ಟವಾಗಿ ರೂಪಿಸುವುದು ಕಷ್ಟ ಎಂದು ಹೇಳಿದ್ದಾರೆ.
ಅಲ್ಲದೆ, ಈ ಸಂಬಂಧ ಮಾನದಂಡಗಳನ್ನು ರೂಪಿಸುವ ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪಾತ್ರ (2003) ಸಮಿತಿಗಳ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ಹೀಗಾಗಿ ಸದ್ಯ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ಡಾ.ಸೀತಾಕಾಂತ ಮೊಹಾಪಾತ್ರ ಸಮಿತಿಯು ಎಂಟನೇ ಪರಿಚ್ಛೇದದಲ್ಲಿರುವ ಅಧಿಕೃತ ಭಾಷೆಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ತುಳುಪರ ಸಂಘಟನೆಗಳು, ತುಳುಭಾಷಿಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ತುಳುಪರ ಧ್ವನಿಯೆತ್ತಿದ್ದ ಕಾಸರಗೋಡು ಸಂಸದರು!
ಕಾಸರಗೋಡು ಕ್ಷೇತ್ರದ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಇದೇ ಮೊದಲ ಬಾರಿಗೆ ತುಳುಪರ ಧ್ವನಿಯೆತ್ತಿರುವುದಲ್ಲ. ಈ ಹಿಂದೆಯೂ ಅಧಿವೇಶನದಲ್ಲಿ ತುಳುಪರ ದ್ವನಿಯೆತ್ತಿದ್ದರು. ತುಳುಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದರು. ದಕ್ಷಿಣ ಕನ್ನಡ ಉಡುಪಿ ಮಾತ್ರವಲ್ಲದೇ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಹುಭಾಗಗಳಲ್ಲಿ ತುಳು ಭಾಷೆ ಮಾತನಾಡುತ್ತಾರೆ. ಈಗಾಗಲೇ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಮಣಿಪುರಿ ಮತ್ತು ಸಂಸ್ಕೃತ ಭಾಷೆಗಳಿಗೆ ಹೋಲಿಸಿದರೆ ತುಳುಭಾಷಿಕರ ಸಂಖ್ಯೆ ಅಧಿಕವಾಗಿದೆ ಎಂದು ಅಂಕಿ ಅಂಶ ಸಹಿತ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ತುಳುಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂಬುದು ದಶಕಗಳ ಬೇಡಿಕೆ. ಈ ನಿಟ್ಟಿನಲ್ಲಿ ಹೋರಾಟಗಳು ನಿರಂತರವಾಗಿವೆ. ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನ ನಡೆಸುತ್ತಿಲ್ಲ ಎಂಬ ಆರೋಪಗಳು ಒಂದೆಡೆಯಾದರೆ, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಒಂದೊಂದೇ ಪೂರಕ ವಿದ್ಯಮಾನಗಳು ತುಳುವರಲ್ಲಿ ಈ ಬೆಗೆಗಿನ ಆಸೆ ಜೀವಂತವಾಗಿರಿಸಿದೆ.
ಇತ್ತೀಚಿನ ದಿನಗಳಲ್ಲಿ ತುಳುಪರ ಧ್ವನಿ ಬಲವಾಗಿ ಕೇಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಈ ನಿಟ್ಟಿನಲ್ಲಿ ಕೆಲವೊಂದು ಪೂರಕ ಬೆಳವಣಿಗೆ ನಡೆಯುತ್ತಿರುವ ಕಾರಣದಿಂದ ಇನ್ನೇನು ಕೆಲವೇ ದಿನಗಳಲ್ಲಿ ತುಳುಭಾಷೆ ರಾಜ್ಯದ ಅಧಿಕೃತ ಭಾಷೆಯಾಗುವುದರ ಜೊತೆಗೆ ಸಂವಿಧಾನಿಕ ಮಾನ್ಯತೆಯೂ ಲಭಿಸಲಿದೆ ಎಂಬ ನಿರೀಕ್ಷೆ ತುಳುಭಾಷಿಕರಲ್ಲಿತ್ತು. ಆದರೆ ಸಚಿವರ ಈ ಹೇಳಿಕೆ , ತುಳುಭಾಷಿಕರಿಗೆ ನಿರಾಶೆ ಮೂಡಿಸಿದೆ. ತುಳುಭಾಷೆಗೆ ಸೂಕ್ತ ಸ್ಥಾನಮಾನ ಸಿಗಬಹುದೇ ಎಂಬ ಅನುಮಾನ ಮೂಡುವಂತೆ ಮಾಡಿದೆ.