ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ಕಾನೂನುಗಳ ಪ್ರಕಾರ ಟ್ವಿಟರ್’ನಿಂದ ನೇಮಕಗೊಂಡಿದ್ದ ಕುಂದುಕೊರತೆ ಆಲಿಸುವ ಅಧಿಕಾರಿ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಟ್ವಿಟರ್ ಸಂಸ್ಥೆ ಮಧ್ಯಂತರವಾಗಿ ಧರ್ಮೇಂದ್ರ ಚತುರ್ ಎಂಬ ವ್ಯಕ್ತಿಯನ್ನು ಕಾನೂನು ಪಾಲನೆಯ ಹಿನ್ನೆಲೆಯಲ್ಲಿ ಭಾರತದ ಕುಂದುಕೊರತೆ ಆಲಿಸುವ ಅಧಿಕಾರಿಯಾಗಿ ನೇಮಕ ಮಾಡಿತ್ತು. ಆದರೆ ಅವರು ಸದ್ಯ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಟ್ವಿಟರ್ ನಿರಾಕರಿಸಿದೆ.
ಹೊಸ ಐಟಿ ಕಾನೂನು ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ-ಟ್ವಿಟರ್ ಮಧ್ಯೆ ಆಗಿಂದಾಗೆ ಘರ್ಷಣೆ ನಡೆಯುತ್ತಲೇ ಇದೆ. ದೇಶದ ಹೊಸ ಕಾನೂನು ಪಾಲನೆ ಮಾಡಲು ಟ್ವಿಟರ್ ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು.
ಮೇ.25ರಂದು ಕೇಂದ್ರದಿಂದ ಹೊಸ ಕಾನೂನು ಜಾರಿಯಾಗಿದ್ದು, ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಗ್ರಾಹಕರಿಂದ ದೂರು ಅಥವಾ ಆಕ್ಷೇಪಣೆಗಳು ವ್ಯಕ್ತವಾದಲ್ಲಿ ಅವುಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಬೇಕು ಎಂಬ ನಿಯಮ ಮಾಡಲಾಗಿದೆ. 50 ಲಕ್ಷ ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಕುಂದು-ಕೊರತೆಗಳನ್ನು ಆಲಿಸುವ ಅಧಿಕಾರಿಯನ್ನು ನೇಮಕ ಮಾಡಿ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂಬ ನಿಯಮವಿದೆ.
ಅಷ್ಟೇ ಅಲ್ಲದೆ ಮುಖ್ಯ ಅನುಸರಣೆ ಅಧಿಕಾರ, ನೋಡಲ್ ಸಂಪರ್ಕ ಅಧಿಕಾರಿ ಹಾಗೂ ಸ್ಥಳೀಯವಾಗಿ ಕುಂದು ಕೊರತೆಗಳನ್ನು ಆಲಿಸುವ ಅಧಿಕಾರಿಯ ನೇಮಕವಾಗಬೇಕಿದೆ ಎಂದು ಸರ್ಕಾರ ತನ್ನ ನಿಯಮದಲ್ಲಿ ತಿಳಿಸಿದೆ. ಟ್ವಿಟರ್ ಈಗಾಗಲೇ ಕಾನೂನಿನ ರಕ್ಷಣೆಯನ್ನು ಕಳೆದುಕೊಂಡಿದ್ದು, ಟ್ವಿಟರ್ ನಲ್ಲಿ ಅದರ ಚಂದಾದಾರರು ಪೋಸ್ಟ್ ಮಾಡುವ ಅಂಶಗಳಿಗೆ ಕಾನೂನಾತ್ಮಕವಾಗಿ ಸಂಸ್ಥೆಯೇ ಹೊಣೆಯಾಗಿರಲಿದೆ.
ಹೊಸ ಐಟಿ ನಿಯಮ ಉಲ್ಲಂಘನೆ; ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನ ಕಳೆದುಕೊಳ್ಳಲಿರುವ ಟ್ವಿಟರ್