ಉಡುಪಿ: ಕೊರೋನಾ ನಿಯಂತ್ರಣ ದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉಡುಪಿ ಜಿಲ್ಲೆ ಸಂಪೂರ್ಣ ಸ್ಥಬ್ದಗೊಂಡಿದೆ. ನಗರದಲ್ಲಿ ಅಘೋಷಿತ ಬಂದ್ ರೀತಿಯ ವಾತಾವರಣ ಕಂಡುಬಂತು.
ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಜನಸಂಖ್ಯೆ ವಿರಳವಾಗಿತ್ತು. ಅಗತ್ಯ ಸೇವೆಗಳನ್ನು ಒದಗಿಸುವ ಔಷಧ ಅಂಗಡಿಗಳು, ದಿನಸಿ ಅಂಗಡಿಗಳು, ಬೇಕರಿ, ತರಕಾರಿ, ಹಣ್ಣಿನ ಅಂಗಡಿ, ಹೋಟೆಲ್, ಹಾಲಿನ ಕೇಂದ್ರಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಳಿಗೆ, ಕೃಷಿ ಪರಿಕರಗಳು, ಸೆಲೂನ್ ಸೇರಿದಂತೆ ಸರ್ಕಾರ ಪಟ್ಟಿ ಮಾಡಿರುವ ಮಳಿಗೆಗಳು ಮಾತ್ರ ತೆರೆದಿದ್ದವು. ಜವಳಿ, ಎಲೆಕ್ಟ್ರಾನಿಕ್ಸ್, ಪಾತ್ರೆ, ಮೊಬೈಲ್, ಚಿನ್ನಾಭರಣ, ಪಾದರಕ್ಷೆಗಳು, ಹಾರ್ಡ್ ವೇರ್ ಅಂಗಡಿಗಳು ಮುಚ್ಚಿದ್ದವು.
ಖಾಸಗಿ ಹಾಗೂ ಸರಕಾರಿ ಬಸ್ಸುಗಳು ಒಡಾಡವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಹೆದ್ದಾರಿ ಸೇರಿದಂತೆ ಒಳರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿಸುತ್ತಿವೆ.