ವಾಣಿಜ್ಯ ಜಾಹಿರಾತು

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಬಜೆಟ್ ಮಂಡಿಸಲು ಸಿದ್ದವಾಗಿದ್ದಾರೆ. ನಾಳೆ (ಫೆ.1) ಬಜೆಟ್ ಮಂಡಿಸಲಿದ್ದು, ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯವು ಈ ಬಾರಿಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಅದಕ್ಕೂ ಮೂರು ವಾರಗಳ ಮೊದಲು ಕೇಂದ್ರ ಸರ್ಕಾರದ ಪರವಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಕಾರಣಕ್ಕಾಗಿ ಈ ಭಾರಿಗೆ ಬಜೆಟ್ ಕುರಿತು ನಿರೀಕ್ಷೆಗಳಿವೆ.

ಕೇಂದ್ರದ ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಘೋಷಣೆಗಳಾಗುವ ಸಾಧ್ಯತೆಗಳಿವೆ. ಮತದಾರರನ್ನು ಓಲೈಸಲು ಬಡವರ ಪರ ಬಜೆಟ್ ಇದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ವೇತನ ವರ್ಗ ಮತ್ತು ಸಣ್ಣ ವ್ಯಾಪಾರಿಗಳಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.  ಜನಸಾಮಾನ್ಯರು ವಸತಿ ಜಾಗಗಳನ್ನು ಖರೀದಿಸಲು ಪ್ರೇರೇಪಿಸಲು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗೃಹ ಸಾಲದಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಬಜೆಟ್ ನಲ್ಲಿ ಇರಲಿದೆ.

ಇಂದಿನಿಂದ ಆರಂಭಗೊಂಡ ಬಜೆಟ್ ಅಧಿವೇಶನಕ್ಕಾಗಿ ಸಂಸತ್ ಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಆರ್ಥಿಕ ಜಗತ್ತಿನ ವಿಶ್ವಾಸಾರ್ಹ ಧ್ವನಿ, ಸಕಾರಾತ್ಮಕ ಸಂದೇಶ, ಭರವಸೆ ಮತ್ತು ಉತ್ಸಾಹದ ಕಿರಣ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ. ಈ ಬಾರಿಯ ಬಜೆಟ್  ಹೊಸ ಭರವಸೆಯ ಕಿರಣವನ್ನು, ಹೊಸ ಭರವಸೆಗಳನ್ನು ಹೊತ್ತು ತರುತ್ತಿದೆ ಎಂದು ಹೇಳಿದ್ದಾರೆ.  ಭಾರತದ ಬಜೆಟ್ ಮೇಲೆ ಇಡೀ ವಿಶ್ವವೇ ತನ್ನ ದೃಷ್ಟಿಯನ್ನು ನೆಟ್ಟಿದೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಲೋಕಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ದಿನ ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ. ನಮಗೆ ದೇಶ ಮೊದಲು, ಉಳಿದೆಲ್ಲವೂ ಎರಡನೇ ಸ್ಥಾನದಲ್ಲಿ ಇರಬೇಕು ಎಂಬ ಆಲೋಚನೆ ನಮ್ಮೆಲ್ಲರಲ್ಲೂ ಇರಬೇಕು. ಬಜೆಟ್ ಅಧಿವೇಶನದಲ್ಲಿ ವಾಗ್ವಾದದೊಂದಿಗೆ ಚರ್ಚೆ ನಡೆಸುತ್ತೇವೆ. ಸದನದೊಳಗೆ ಪ್ರತಿಯೊಂದು ವಿಷಯದ ಕುರಿತು ಉತ್ತಮವಾದ ಚರ್ಚೆ ನಡೆಸಬೇಕು. ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ಎಲ್ಲಾ ಸಂಸದರು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.