ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ ಅವರು ಗುರುವಾರ ಸಂಜೆ ವಿಧಿವಶರಾಗಿದ್ದಾರೆ.
ಉದಯ್ ಕಲರ್ ಲ್ಯಾಬ್ ಮಾಲೀಕರಾಗಿರುವ ಉದಯ್ ಹುತ್ತಿನಗದ್ದೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹುತ್ತಿನಗದ್ದೆಯವರಾಗಿದ್ದರು.
ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಉದಯ್ 1989 ರ ವೇಳೆಗೆ ‘ಆರಂಭ’ ಹೆಸರಿನ ಸಿನಿಮಾದಲ್ಲಿ ನಟಿಸಿದರು. ಸ್ಪುರದ್ರೂಪಿ ಆಗಿದ್ದ ಉದಯ್ ಹೊತ್ತಿನಗದ್ದೆ ತಮ್ಮ ಮೊದಲ ಸಿನಿಮಾದಿಂದಲೇ ದೊಡ್ಡ ಮಟ್ಟದಲ್ಲಿ ಮಿಂಚು ಹರಿಸಿದ್ದರು. ಆಗಿನ ಕಾಲಕ್ಕೆ ಭಾರಿ ಪ್ರಚಾರ ನೀಡಲಾಗಿದ್ದ ಸಿನಿಮಾಗಳಲ್ಲಿ ಒಂದಾಗಿತ್ತು ‘ಆರಂಭ’. ಬಳಿಕ ಉದಯ್ ಹೊತ್ತಿನಗದ್ದೆ ನಟಿ ಲಲಿತಾಂಬ ಅವರನ್ನು ವಿವಾಹವೂ ಆದರು.
ಮಾಗಡಿ ರಸ್ತೆಯಲ್ಲಿ ವಾಸವಾಗಿದ್ದ ಉದಯ್ ಹುತ್ತಿನಗದ್ದೆ ಅವರು, ರಾಜಾಜಿನಗರದ ಬಾಷ್ಯಂ ಸರ್ಕಲ್‌ನಲ್ಲಿ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
1989ರಲ್ಲಿ ಆರಂಭ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಉದಯ್ ಹುತ್ತಿನಗದ್ದೆ ಅವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.