ಬೆಂಗಳೂರು: ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎ
ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ.
ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ.
ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ,
ಮಕ್ಕಳಿಗೆ ನಿರಂತರ ಕಲಿಕೆಯ ಕಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲೆಗಳು ಆರಂಭವಾಗುವವರೆಗೂ ಮಕ್ಕಳನ್ನು ನಿರಂತರ ಕಲಿಗೆ ಹಚ್ಚುವ ಉದ್ದೇಶವನ್ನು ಇಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಆದರೆ ವಿದ್ಯಾಗಮ ಕಾರ್ಯಕ್ರಮ ಆರಂಭವಾದ ನಂತರ ಹಲವು ಮಕ್ಕಳು ಮತ್ತು ಶಿಕ್ಷಕರಿಗೆ ಕೊರೋನಾ ಸೋಂಕು ತಗಲಿದೆ. ಇದರಿಂದ ಮಕ್ಕಳು ಮತ್ತು ಶಿಕ್ಷಕರ ಜೀವಕ್ಕೆ ಅಪಾಯವಾಗುತ್ತಿದೆ ಎಂದು ರಾಜ್ಯದ ಹಲವು ಜಿಲ್ಲೆಗಳಿಂದ ವ್ಯಾಪಕವಾದ ದೂರುಗಳು ಕೇಳಿಬಂದಿದ್ದು ಈ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ
ಇನ್ನು ಶಾಲೆ ಪ್ರಾರಂಭದ ಬಗೆಗಿನ ಗೊಂದಲಗಳ ಬಗ್ಗೆಯೂ ಶಿಕ್ಷಣ ಸಚಿವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ.ನಮಗೆ ನಮ್ಮ ಮಕ್ಕಳ ಆರೋಗ್ಯ, ಸುರಕ್ಷತೆ ಅತ್ಯಂತ ಮುಖ್ಯ. ಶಾಲೆಗಳ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಆದರೆ ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂಬರ್ಥದಲ್ಲಿ ವಿಪುಲವಾಗಿ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ. ಶಿಕ್ಷಣ ಇಲಾಖೆಯ ಮುಂದಿನ ತೀರ್ಮಾನವನ್ನು ಮಕ್ಕಳ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ಎಲ್ಲರೊಡನೆ ಸಮಾಲೋಚನೆಯ ನಂತರ ಕೈಗೊಳ್ಳಲಾಗುತ್ತದೆಯೇ ಹೊರತು ಯಾವುದನ್ನೂ ಧಿಡೀರನೆ ಘೋಷಿಸುವುದಿಲ್ಲ.ಪೋಷಕರ ಮನಸ್ಸಿನಲ್ಲಿ ಈ ಕುರಿತು ಕಿಂಚಿತ್ ಸಹ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.