ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಹಿಂದೆ ಟಿ20 ಹಾಗೂ ಏಕದಿನ ತಂಡದ ನಾಯಕತ್ವವನ್ನು ತ್ಯಜಿಸಿದ್ದ ಕೊಹ್ಲಿ ಇದೀಗ ದಿಢೀರನೆ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ.
ವಿರಾಟ್ ಕೊಹ್ಲಿ 2014 ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕೊಹ್ಲಿ ನಾಯಕತ್ವದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡವು ಹಲವು ಸರಣಿಗಳನ್ನು ಜಯಿಸಿ ದಾಖಲೆ ಬರೆದಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಸೋಲಿನ ಬೆನ್ನಲ್ಲೇ ಕೊಹ್ಲಿ ದಿಢೀರ್ ರಾಜೀನಾಮೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಮಾತು
ವಿರಾಟ್ ಕೊಹ್ಲಿ ತಮ್ಮ ಹೇಳಿಕೆಯಲ್ಲಿ, ‘ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನನ್ನ 7 ವರ್ಷಗಳ ಕಠಿಣ ಪರಿಶ್ರಮವಿದೆ. ನಾನು ನನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಪ್ರತಿಯೊಂದಕ್ಕೂ ಒಂದು ಹಂತದಲ್ಲಿ ಅಂತ್ಯವಿದೆ. ನನಗೆ ಇದು ಟೆಸ್ಟ್ ನಾಯಕತ್ವದ ಅಂತ್ಯವಾಗಿದೆ. ಈ ಪ್ರಯಾಣವು ಏರಿಳಿತಗಳಿಂದ ಕೂಡಿದೆ. ಆದರೆ ಕಠಿಣ ಪರಿಶ್ರಮ ಮತ್ತು ನಂಬಿಕೆಯ ಕೊರತೆ ಇರಲಿಲ್ಲ. ನಾನು ಯಾವಾಗಲೂ ಎಲ್ಲದರಲ್ಲೂ ನನ್ನ ಶೇಕಡಾ 120 ಅನ್ನು ನೀಡಲು ಪ್ರಯತ್ನಿಸಿದೆ. ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ನನಗೆ ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನನ್ನ ತಂಡಕ್ಕಾಗಿ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ ಎಂಬುದು ನನ್ನ ಹೃದಯದಲ್ಲಿ ಸ್ಪಷ್ಟವಾಗಿದೆ.
ಇಷ್ಟು ದೀರ್ಘ ಕಾಲ ನನ್ನ ದೇಶವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ ಬಿಸಿಸಿಐಗೆ ಮತ್ತು ವಿಶೇಷವಾಗಿ ತಂಡವು ಯಾವುದೇ ಸಂದರ್ಭದಲ್ಲೂ ಎದೆಗುಂದಬಾರದು ಎಂದು ನಾನು ಭಾವಿಸಿದ ದೃಷ್ಟಿಕೋನವನ್ನು ತಂದ ತಂಡದ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ನನ್ನ ಪ್ರಯಾಣವನ್ನು ಸ್ಮರಣೀಯ ಮತ್ತು ಸುಂದರಗೊಳಿಸಿದ್ದೀರಿ. ಟೆಸ್ಟ್ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ನಿರಂತರವಾಗಿ ಎಂಜಿನ್ನಂತೆ ಕೆಲಸ ಮಾಡಿದ ರವಿ ಭಾಯ್ ಮತ್ತು ಬೆಂಬಲ ಗುಂಪಿಗೆ ಧನ್ಯವಾದಗಳು. ಈ ಜೀವನ ದೃಷ್ಟಿಯನ್ನು ಪೂರೈಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ಕೊನೆಯದಾಗಿ ನನ್ನ ಮೇಲೆ ನಂಬಿಕೆ ಇಟ್ಟ ಎಂಎಸ್ ಧೋನಿಗೆ ಧನ್ಯವಾದ’ ಎಂದು ತಿಳಿಸಿದ್ದಾರೆ.
— Virat Kohli (@imVkohli) January 15, 2022
ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ದಾಖಲೆ
68 ಟೆಸ್ಟ್ ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದ್ದ ವಿರಾಟ್ ಕೊಹ್ಲಿ 40 ಟೆಸ್ಟ್ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇನ್ನು 17 ಟೆಸ್ಟ್ಗಳಲ್ಲಿ ಸೋತರೆ 11 ಪಂದ್ಯಗಳು ಡ್ರಾ ಆಗಿವೆ. ಈ ಮೂಲಕ ಟೀಮ್ ಇಂಡಿಯಾ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 10 ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನು 6 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ವಿರಾಟ್ ಕೊಹ್ಲಿಯ ಕೆಲವು ಪ್ರಮುಖ ದಾಖಲೆಗಳು
ಆಸ್ಟ್ರೇಲಿಯನ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ಭಾರತೀಯ ನಾಯಕ, ದಕ್ಷಿಣ ಆಫ್ರಿಕಾ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಭಾರತೀಯ ನಾಯಕ, ಇಂಗ್ಲೆಂಡ್ ನೆಲದಲ್ಲಿ 3 ಟೆಸ್ಟ್ ಗೆದ್ದ ಮೊದಲ ಭಾರತೀಯ ನಾಯಕ ಎಂದು ಕೊಹ್ಲಿ ಗುರುತಿಸಿಕೊಂಡಿದ್ದಾರೆ.