“ಕರ್ಜಿ ಕಾಯಿ” ಎನ್ನುವುದು ಉತ್ತರ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿ. ವಿಶೇಷ ಸಂದರ್ಭದಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಸಿಹಿ ಹೂರಣವನ್ನು ತುಂಬಿ ತಯಾರಿಸುವ ಈ ಸಿಹಿಗೆ ಕರಣಿ, ಗುಜಿಯಾ ಎಂದು ಕೂಡ ಕರೆಯುತ್ತಾರೆ.
ಮನೆಯಲ್ಲಿ ಈ ರುಚಿಕರವಾದ ಸಿಹಿಯನ್ನು ತಯಾರಿಸಲು ನೀವು ಉತ್ಸುಕರಾಗಿದ್ದರೆ, ನಾವು ತಿಳಿಸಿಕೊಡುವ ಈ ವಿಧಾನವನ್ನು ಅನುಸರಿಸಿ ನೋಡಿ.
ಬೇಕಾಗುವ ಸಾಮಾಗ್ರಿಗಳು
*ತುಪ್ಪ
*ಮೈದಾ ಹಿಟ್ಟು
*ಉಪ್ಪು
*ನೀರು
*ಸೂಜಿ ರವೆ
*ಗೋಡಂಬಿ
*ಬಾದಾಮಿ
*ಒಣದ್ರಾಕ್ಷಿ
*ಸಕ್ಕರೆ ಪುಡಿ
*ಏಲಕ್ಕಿ ಪುಡಿ
*ಖೋಯಾ
*ಎಣ್ಣೆ, ಕರಿಯಲು ಕರ್ಜಿಕಾಯಿ/ಗುಜಿಯಾ ತಯಾರಿಸುವ ಅಚ್ಚು
ಕರ್ಜಿಕಾಯಿ ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಗೆ ಮೈದಾ ಮತ್ತು 3 ಟೀ ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಗೊಳಿಸಿ, 1/4 ಕಪ್ ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಸೇರಿಸುತ್ತಾ ಹಿಟ್ಟನ್ನು ಗಟ್ಟಿಯಾಗಿ ನಾದಿಕೊಳ್ಳಿ. 2-3 ಹನಿ ತುಪ್ಪವನ್ನು ಸೇರಿಸಿ ಇನ್ನೊಮ್ಮೆ ಕಲಸಿ.
ಮಿಶ್ರಣಕ್ಕೊಂದು ಸುಚಿಯಾದ ತೇವಾಂಶದಿಂದ ಕೂಡಿದ ಬಟ್ಟೆಯನ್ನು ಮುಚ್ಚಿ, 30 ನಿಮಿಷಗಳಕಾಲ ಬಿಡಿ. ಈ ಸಮಯದಲ್ಲೇ ಒಂದು ಬಾಣಲೆಯಲ್ಲಿ ಸೂಜಿ ರವೆಯನ್ನು ಹಾಕಿ ಹುರಿಯಿರಿ. ಇದು ಹೊಂಬಣ್ಣಕ್ಕೆ ತಿರುಗಿ, ಹುರಿದ ಪರಿಮಳ ಬರಲು ಆರಂಭವಾದ ತಕ್ಷಣ ಕೆಳಗಿಳಿಸಿ, ಸಂಪೂರ್ಣವಾಗಿ ಆರಲು ಬಿಡಿ.
ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ಖೋಯಾವನ್ನು ಹಾಕಿ, ಬಿಸಿ ಮಾಡಿ. ಇದಕ್ಕೆ 1/2 ಟೀಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ. ಖೋಯಾ ಪಾತ್ರೆಯ ಸುತ್ತಲು ಬಿಡುತ್ತಾ ಬಂದು, ಮಧ್ಯಭಾಗದಲ್ಲಿ ಸೇರಿಕೊಳ್ಳಬೇಕು. ಆಗ ಉರಿಯನ್ನು ಆರಿಸಿ. ಒಂದೆಡೆ ಸಂಪೂರ್ಣವಾಗಿ ಆರಲು ಇಡಿ.
ಬಿಸಿಯಾದ ಒಂದು ಪಾತ್ರೆ/ಬಾಣಲಿಯಲ್ಲಿ 1/2 ಟೀ ಚಮಚ ತುಪ್ಪವನ್ನು ಹಾಕಿ ಬಿಸಿಮಾಡಿ. ಅದಕ್ಕೆ ಹೆಚ್ಚಿಕೊಂಡ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಹುರಿಯಿರಿ. ಒಣ ಹಣ್ಣುಗಳು ಸಂಪೂರ್ಣವಾಗಿ ಹುರಿಯುವವರೆಗೂ ತಿರುವುತ್ತಿರಿ. ಉರಿಯನ್ನು ಆರಿಸಿ. ಇವು ಸಂಪೂರ್ಣವಾಗಿ ಆರಲು ಒಂದೆಡೆ ಇಡಿ.
ಆರಿದ ಖೋಯಾ ಜೊತೆಗೆ ಸೂಜಿ ರವೆಯನ್ನು ಸೇರಿಸಿ. ಇವುಗಳೊಂದಿಗೆ ಹುರಿದುಕೊಂಡ ಒಣ ಹಣ್ಣು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದಕ್ಕೆ ಸಕ್ಕರೆ ಸೇರಿಸುವ ಮುನ್ನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ತಣಿದಿರಬೇಕು. ಈಗ ಸಕ್ಕರೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ನಿಮ್ಮ ಅಂಗೈಗೆ ಎಣ್ಣೆಯನ್ನು ಸವರಿಕೊಳ್ಳಿ. ಈ ಸಿಹಿ ಹೂರಣವನ್ನು ಅಂಗೈಲಿ ಹಾಕಿಕೊಂಡು, ಚಿಕ್ಕ ಚಿಕ್ಕ ಗಾತ್ರದಲ್ಲಿ, ಮೃದುವಾದ ಉಂಡೆಯನ್ನು ಮಾಡಿಕೊಳ್ಳಿ.
ಮೈದಾ ಹಿಟ್ಟಿನ ಮಿಶ್ರಣವನ್ನು ಪುರಿಯ ಆಕೃತಿಯಲ್ಲಿ ಲಟ್ಟಿಸಿಕೊಳ್ಳಿ. ಗುಜಿಯಾ ಅಚ್ಚಿನ ಒಳ ಭಾಗದಲ್ಲಿ ಎಣ್ಣೆಯನ್ನು ಸವರಿ. ಲಟ್ಟಿಸಿಕೊಂಡ ಪೂರಿಯ ಹಿಟ್ಟನ್ನು ಅಚ್ಚಿನಲ್ಲಿ ಇರಿಸಿ. ಖೋಯಾ ಮಿಶ್ರಣದ ಉಂಡೆಯನ್ನು ಮಧ್ಯದಲ್ಲಿ ಇರಿಸಿ. ಸುತ್ತಲು ನೀರನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಕರ್ಜಿಕಾಯಿ /ಗುಜಿಯಾ ಸರಿಯಾದ ಆಕಾರದಲ್ಲಿ ಅಂಟಿಕೊಳ್ಳುತ್ತದೆ. ಅಚ್ಚನ್ನು ಮುಚ್ಚಿ. ಸುತ್ತಲೂ ಸರಿಯಾಗಿ ಒತ್ತಿ. ಹೆಚ್ಚುವರಿ ಹಿಟ್ಟನ್ನು ತೆಗೆದು, ಉಳಿದ ಹಿಟ್ಟಿಗೆ ಸೇರಿಸಿ. ಅಚ್ಚಿನ ಸುತ್ತಲು ಸರಿಯಾಗಿ ಒತ್ತಿ. ನಂತರ ಅಚ್ಚಿನಿಂದ ಕರ್ಜಿಕಾಯಿ /ಗುಜಿಯಾವನ್ನು ಹೊರ ತೆಗೆಯಿರಿ.
ಗುಜಿಯಾ/ಕರ್ಜಿಕಾಯಿ ಅನ್ನು ಒಂದು ಬಟ್ಟೆಯಿಂದ ಮುಚ್ಚಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗಿದೆಯೇ ಎಂದು ತಿಳಿಯಲು ಒಂದು ಚಿಕ್ಕ ಮೈದಾ ಹಿಟ್ಟಿನ ಉಂಡೆಯನ್ನು ಎಣ್ಣೆಯಲ್ಲಿ ಬಿಡಿ. ಆಗ ಆ ಉಂಡೆ ತಕ್ಷಣವೇ ನೊರೆಗಳೊಂದಿಗೆ ಮೇಲೆ ತೇಲಿ ಬಂದರೆ ಎಣ್ಣೆ ಕಾದಿದೆ ಎಂದರ್ಥ.
ತಕ್ಷಣವೇ ತಯಾರು ಮಾಡಿಕೊಂಡಿರುವ ಕರ್ಜಿಕಾಯಿ/ಗುಜಿಯಾವನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಕರಿಯಿರಿ. ಎರಡು ಭಾಗದಲ್ಲೂ ಸರಿಯಾಗಿ ಬೇಯುವಂತೆ ಕೈಯಾಡಿಸುತ್ತಿರಿ. ಇದು ಹೊಂಬಣ್ಣಕ್ಕೆ ತಿರುಗಿ, ನೊರೆಗಳು ಕಡಿಮೆಯಾದರೆ ಬೆಂದಿದೆ ಎಂದರ್ಥ.(ಪ್ರತಿಯೊಂದು ಗುಜಿಯಾ/ಕರ್ಜಿಕಾಯಿ ಬೇಯಲು 10-15 ನಿಮಿಷ ಬೇಕಾಗುವುದು) ಬೆಂದ ತಕ್ಷಣ ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ.