ವಾಣಿಜ್ಯ ಜಾಹಿರಾತು

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರು ಸೇರಿದಂತೆ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೆ.ಪಿ.ನಡ್ಡಾ, ಕಲ್ಲು ತೂರಾಟದಿಂದಾಗಿ ಪಕ್ಷದ ನಾಯಕರಾದ ಮುಕುಲ್ ರಾಯ್ ಹಾಗೂ ಕೈಲಾಶ್ ವಿಜಯ್‍ವರ್ಗಿಯಾ ಅವರಿಗೆ ಗಾಯವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮುಜುಗರ ತರುವ ಘಟನೆ ಎಂದಿದ್ದಾರೆ.
ನಾನು ಬುಲೆಟ್‍ಪ್ರೂಫ್ ಕಾರ್‍ನಲ್ಲಿ ಪ್ರಯಾಣಿಸುತ್ತಿದ್ದರಿಂದ ಸುರಕ್ಷಿತವಾಗಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಮತ್ತು ಅಸಹಿಷ್ಣುತೆ ಕೊನೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದು ಸಭೆ ನಡೆಯುವ ಸ್ಥಳಕ್ಕೆ ಬಂದು ತಲುಪಿದ್ದೇನೆಂದರೆ ತಾಯಿ ದುರ್ಗೆಯ ಆಶೀರ್ವಾದವೇ ಕಾರಣ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಅವರ ಕಾರಿನ ಮೇಲೆ ಇಟ್ಟಿಗೆ ಬಿದ್ದು, ಕಾರಿನ ಗಾಜು ಪುಡಿಯಾಗಿದೆ. ಇದರ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ದಾಳಿಯಲ್ಲಿ ನನಗೆ ಗಾಯವಾಗಿದೆ, ನಡ್ಡಾ ಅವರ ಕಾರಿನ ಮೇಲೂ ದಾಳಿಯಾಗಿದೆ. ಪೊಲೀಸರ ಸಮ್ಮುಖದಲ್ಲೇ ನಮ್ಮ ಮೇಲೆ ದಾಳಿಯಾಗಿದೆ. ನಾವಿದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಈ ಘಟನೆ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಸರ್ಕಾರದಿಂದ ಘಟನೆ ಕುರಿತು ವರದಿ ಕೇಳಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.