ಮ್ಯೂಚುಯಲ್ ಫಂಡ್’ಗಳಲ್ಲಿ ಹೂಡಿಕೆ ಮಾಡುವವರಿಗೆ ಇರುವ ಸೂಕ್ತ ಆಯ್ಕೆಗಳೇನು?

0

ಹಿಂದಿನ ಸಂಚಿಕೆಯಲ್ಲಿ ಮ್ಯೂಚುಯಲ್ ಫಂಡ್ ಗಳ ವಿಧಗಳ ಬಗ್ಗೆ ಪ್ರಸಾಪಿಸಲಾಗಿತ್ತು. ಹಿಂದಿನ ಸಂಚಿಕೆಯ ಕೊನೆಯಲ್ಲಿ ತಿಳಿಸಿದಂತೆ ಈ ಸಂಚಿಕೆಯಲ್ಲೂ ಇನ್ನಷ್ಟು ಬಗೆಯ ಫಂಡ್ ಗಳ ಬಗ್ಗೆ ತಿಳಿಸಿಕೊಡಲಾಗಿದೆ.

4. ಹೂಡಿಕೆಯ ಉದ್ದೇಶದ ಅನುಸಾರವಾಗಿ ಮ್ಯೂಚುಯಲ್ ಫಂಡ್ ಗಳ ವಿಧಗಳು:

ಬೇರೆ ಬೇರೆ ಹೂಡಿಕೆದಾರರು ಬೇರೆ ಬೇರೆ ರೀತಿಯ ಉದ್ದೇಶವನ್ನಿಟ್ಟುಕೊಂಡು ಹೂಡಿಕೆಯನ್ನು ಮಾಡುತ್ತಾರೆ. ಕೆಲವರಿಗೆ ತೆರಿಗೆಯಲ್ಲಿ ಉಳಿತಾಯದ ಉದ್ದೇಶವಾದರೆ, ಇನ್ನು ಕೆಲವರಿಗೆ ಭವಿಷ್ಯದಲ್ಲಿ ಇನ್ನೊಂದು ಆದಾಯದ ಮೂಲವನ್ನು ಹೊಂದುವ ಉದ್ದೇಶ. ಕೆಲವರಿಗೆ ನಿವೃತ್ತಿಯ ನಂತರ ಪಿಂಚಣಿ ರೂಪದಲ್ಲಿ ಆದಾಯ ಪಡೆಯುವ ಉದ್ದೇಶವಿದ್ದರೆ, ಇನ್ನು ಕೆಲವರಿಗೆ ತಮ್ಮ ಉಳಿತಾಯದ ಹಣವನ್ನು ಭದ್ರವಾಗಿ ಕಾಪಾಡಿಕೊಳ್ಳುವ ಉದ್ದೇಶದಿಂದ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಹೂಡಿಕೆದಾರರ ಅಗತ್ಯತೆಗೆ ಅನುಸಾರವಾಗಿ ವಿವಿಧ ರೀತಿಯ ಫಂಡ್ ಗಳು ಲಭ್ಯವಿದೆ.

ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

a) ಬೆಳವಣಿಗೆಯ ಫಂಡ್ ಗಳು (Growth Funds)
ಕೆಲವು ಹೂಡಿಕೆದಾರರಿಗೆ ತಮ್ಮ ಹೂಡಿಕೆಯು ಅತ್ಯಲ್ಪ ಸಮಯದಲ್ಲಿ ಬೆಳೆಯಬೇಕು ಅನ್ನುವ ಮಹತ್ವಾಕಾಂಕ್ಷೆಯಿರುತ್ತದೆ. ಅಂತಹ ಹೂಡಿಕೆದಾರರಿಗೆ Growth ಫಂಡ್ ಗಳು ಹೇಳಿ ಮಾಡಿಸಿದ ಫಂಡ್ ಗಳು. ಈ ಫಂಡ್ ಗಳು ಸಣ್ಣ ಸಣ್ಣ ಹೂಡಿಕೆದಾರರಿಂದ ಒಟ್ಟು ಸೇರಿಸಿದ ಹಣವನ್ನು ಮುಖ್ಯವಾಗಿ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಗಳು ಕ್ಷಿಪ್ರವಾಗಿ ಮೇಲೇರಿದರೆ ಅದಕ್ಕನುಗುಣವಾಗಿ ಈ ಫಂಡ್ ಗಳ ಮೌಲ್ಯವೂ ಹೆಚ್ಚುತ್ತದೆ. ಇಲ್ಲಿ ಫಂಡ್ ಮ್ಯಾನೇಜರ್ ಗಳು ವಿಶೇಷವಾದ ವಿವೇಚನೆಯನ್ನು ಬಳಸಿ ಹೆಚ್ಚು ಲಾಭ ಕೊಡುವ ಷೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುತ್ತಾರೆ. ಹಾಗಾಗಿ ನಷ್ಟದ ಅಪಾಯ ಸ್ವಲ್ಪ ಕಡಿಮೆ. ಆದಾಗ್ಯೂ ಆಗೊಮ್ಮೆ ಈಗೊಮ್ಮೆ ನಷ್ಟ ಸಂಭವಿಸಿದ್ದೂ ಇದೆ. ಆದ್ದರಿಂದ ಇಂತಹ ಮ್ಯೂಚುಯಲ್ ಫಂಡ್ ಗಳು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುವ ಹೂಡಿಕೆದಾರರಿಗೆ ಹೆಚ್ಚು ಸೂಕ್ತ. Axis Blue-chip Fund, Canara Robeco Bluechip Equity Fund , HDFC Index Sensex, IIFL Focused Equity Fund ಮುಂತಾದ ಮ್ಯೂಚುಯಲ್ ಫಂಡ್ ಗಳು growth ಫಂಡ್ ಗಳಿಗೆ ಉದಾಹರಣೆಗಳು.

b) ಆದಾಯದ ಫಂಡ್ ಗಳು (Income Funds)
ಹಿಂದಿನ ಸಂಚಿಕೆಯಲ್ಲಿ ಡೆಟ್ ಫಂಡ್ ಗಳ ಬಗ್ಗೆ ತಿಳಿಸಲಾಗಿತ್ತಷ್ಟೆ. ಇಂತಹ ಡೆಟ್ ಫಂಡ್ ಗಳು ಆದಾಯದ ಫಂಡ್ ಗಳ ಅಡಿಯಲ್ಲೂ ಬರುತ್ತವೆ. ಇಲ್ಲಿ ಮ್ಯೂಚುಯಲ್ ಫಂಡ್ ನ ಹಣವನ್ನು ನಿಶ್ಚಿತ ಆದಾಯ ಕೊಡುವ ಸಾಮಗ್ರಿಗಳಾದ ಬಾಂಡ್ ಗಳು, ಡಿಬೆಂಚರ್ ಗಳು ಮುಂತಾದವುಗಲ್ಲಿ ಹೂಡಲಾಗುತ್ತದೆ. ಇಲ್ಲಿ ಆದಾಯದ ಅನಿಶ್ಚಿತತೆ ತುಂಬಾ ಕಡಿಮೆಯಿರುತ್ತದೆ. ಹಾಗಾಗಿ growth ಫಂಡ್ ಗಳಿಗೆ ಹೋಲಿಸಿದರೆ ಇಲ್ಲಿ ಬರುವ ಆದಾಯ ಸ್ವಲ್ಪ ಕಡಿಮೆ. ಹಾಗಾಗಿ ಇಂತಹ ಫಂಡ್ ಗಳು ಮಧ್ಯಮ ಅಪಾಯವನ್ನು ಸ್ವೀಕರಿಸಲು ಸಿದ್ಧರಿರುವ ಹೂಡಿಕೆದಾರರಿಗೆ ಹೆಚ್ಚು ಸೂಕ್ತ. SBI Regular Savings Fund, Nippon India Gilt Securities Fund, Aditya Birla Sun Life Banking & PSU Debt Fund ಮುಂತಾದ ಮ್ಯೂಚುಯಲ್ ಫಂಡ್ ಗಳು ಈ ತರಗತಿಯ ಫಂಡ್ ಗಳಿಗೆ ಸೇರುತ್ತವೆ.

c) ದ್ರವ್ಯ ಫಂಡ್ ಗಳು (Liquid Fund)
ಕೆಲವು ಹೂಡಿಕೆದಾರರು ಅತಿ ಕಡಿಮೆ ಸಮಯಕ್ಕೆ ಮತ್ತು ತಕ್ಷಣಕ್ಕೆ ನಗದೀಕರಿಸಬಹುದಾದ ಹೂಡಿಕಾ ಸ್ಥಳಗಳ ಹುಡುಕಾಟದಲ್ಲಿ ಇರುತ್ತಾರೆ. ಅಂತವರ ಅಗತ್ಯತೆಗಾಗಿ ಲಿಕ್ವಿಡ್ ಫಂಡ್ ಗಳು ಸಹಕಾರಿಯಾಗಿವೆ. ಲಿಕ್ವಿಡ್ ಫಂಡ್ ಗಳು ತಮ್ಮ ಹಣವನ್ನು ಕಡಿಮೆ ಅವಧಿಯ ಹೂಡಿಕಾ ತಾಣಗಳಾದ ಟ್ರೆಸ್ಸರಿ ಬಿಲ್ ಗಳು, ಕಮರ್ಷಿಯಲ್ ಪೇಪರ್ ಗಳು ಮುಂತಾದ ಗರಿಷ್ಟ 91 ದಿನಗಳ ವಾಯಿದೆ ಇರುವ ಸಾಮಗ್ರಿಗಳಲ್ಲಿ ಹೂಡಿಕೆ ಮಾಡುತ್ತವೆ. ಇಂತಹ ಮ್ಯೂಚುಯಲ್ ಫಂಡ್ ಗಳು ಕಡಿಮೆ ಅವಧಿಯಲ್ಲಿ ಸಾಮಾನ್ಯ ಬ್ಯಾಂಕ್ ಗಳು ಕೊಡುವ ಉಳಿತಾಯ ಖಾತೆಯ ಮೇಲಿನ ಬಡ್ಡಿಗಿಂತ ಹೆಚ್ಚು ಆದಾಯವನ್ನು ಕೊಡುತ್ತವೆ. Quant Liquid Fund, IDBI Liquid Fund, Franklin India Liquid Fund, Mahindra Liquid Fund, Edelweiss Liquid Fund ಇತ್ಯಾದಿಗಳು ಕೆಲವು ಪ್ರಮುಖ ಲಿಕ್ವಿಡ್ ಫಂಡ್ ಗಳಾಗಿವೆ.

d) ಕರ ಉಳಿತಾಯದ ಮ್ಯೂಚುಯಲ್ ಫಂಡ್ (Tax Saving Fund)
ಆದಾಯ ತೆರಿಗೆ ಪಾವತಿ ಮಾಡುವ ಹೂಡಿಕೆದಾರರು ತಮ್ಮ ತೆರಿಗೆಯಲ್ಲಿ ಉಳಿತಾಯ ಮಾಡುವ ಜೊತೆ ಜೊತೆಗೆ ಷೇರುಗಳಲ್ಲಿ ಹೂಡಿಕೆ ಮಾಡುವ ಅಪೇಕ್ಷೆ ಹೊಂದಿದ್ದರೆ ಅಂತವರಿಗೆಂದೇ ಕರ ಉಳಿತಾಯ ಮಾಡುವ ಮ್ಯೂಚುಯಲ್ ಫಂಡ್ ಗಳು ಇವೆ. ಇವುಗಳನ್ನು Equity Linked Saving Scheme (ELSS ) ಅಂತಲೂ ಕರೆಯುತ್ತಾರೆ. ಇಂತಹ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯಿದೆಯ 80ನೇ ಸೆಕ್ಷನ್ ಅಡಿಯಲ್ಲಿ ವಿನಾಯಿತಿ ಸಿಗುತ್ತದೆ. ಗರಿಷ್ಟ 1,50,000 ರೂ.ಗಳ ಹೂಡಿಕೆಯನ್ನು ಒಟ್ಟು ಆದಾಯದಿಂದ ಕಳೆದು ಉಳಿದ ಆದಾಯಕ್ಕೆ ತೆರಿಗೆ ಪಾವತಿ ಮಾಡಿದರೆ ಆಯಿತು. ಇಂತಹ ಫಂಡ್ ಗಳಲ್ಲಿ ಗರಿಷ್ಟ 3 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಅಂದರೆ ಒಮ್ಮೆ ಹೂಡಿಕೆ ಮಾಡಿದರೆ ಮುಂದಿನ ಮೂರು ವರ್ಷಗಳ ತನಕ ಅದನ್ನು ಹಿಂಪಡೆಯಲು ಆಗುವುದಿಲ್ಲ. ಇಲ್ಲಿ ಕನಿಷ್ಠ 500 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಟ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ದೀರ್ಘಕಾಲೀನ ಹೂಡಿಕೆದಾರರಿಗೆ ಇಂತಹ ಫಂಡ್ ಗಳು ಸೂಕ್ತ. ಹೆಚ್ಚಿನ ELSS ಫಂಡ್ ಗಳು ವಾರ್ಷಿಕವಾಗಿ ಶೇಕಡಾ 75 ಕ್ಕಿಂತಲೂ ಅಧಿಕ ಆದಾಯ ಕೊಟ್ಟಿವೆ.

e) ಪೆನ್ಷನ್ ಅಥವಾ ನಿವೃತ್ತಿ ಫಂಡ್ ಗಳು
ಹೆಸರೇ ಹೇಳುವಂತೆ ಪೆನ್ಷನ್ ಅಥವಾ ನಿವೃತ್ತಿ ಫಂಡ್ ಗಳು ನಿವೃತ್ತಿಯ ನಂತರ ನಿಗದಿತ ಆದಾಯ ಬೇಕೆಂದು ಬಯಸುವ ವರ್ಗದ ಹೂಡಿಕೆದಾರರ ಅನುಕೂಲಕ್ಕಾಗಿ ಜನ್ಮ ತಾಳಿವೆ. ಇಂತಹ ಫಂಡ್ ಗಳು ಧೀರ್ಘ ಕಾಲದ ಹೂಡಿಕೆಗಳಾಗಿವೆ. ಇಂತಹ ಫಂಡ್ ಗಳನ್ನೂ ಹೈಬ್ರಿಡ್ ಫಂಡ್ ಗಳ ಗುಂಪಿಗೆ ಸೇರಿಸಬಹುದು. ಯಾಕೆಂದರೆ ಇಲ್ಲಿ ಫಂಡ್ ಮ್ಯಾನೇಜರ್ ಗಳು ಹಣವನ್ನು ಈಕ್ವಿಟಿ ಮತ್ತು ಡೆಟ್ ನಂತಹ ಎರಡೂ ಬಗೆಯ ಹೂಡಿಕೆಗಳಲ್ಲಿ ತೊಡಗಿಸುತ್ತಾರೆ. ಹೀಗಾಗಿ ಇಂತಹ ಫಂಡ್ ಗಳು ಹೆಚ್ಚಿನ ಆದಾಯವನ್ನು ಕೊಡಲು ಸಾಧ್ಯವಾಗುತ್ತದೆ. ಇಂತಹ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ. ಆದರೆ ನಿವೃತ್ತಿ ನಂತರ ಹಣವನ್ನು ಹಿಂಪಡೆಯುವಾಗ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

5. ವಿಶೇಷತೆಯ ಆಧಾರದ ಮೇಲೆ ಮ್ಯೂಚುಯಲ್ ಫಂಡ್ ಗಳ ವಿಧಗಳು;

ಮ್ಯೂಚುಯಲ್ ಫಂಡ್ ಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ವಿವಿಧ ವಿಧಗಳಾಗಿ ವಿಂಗಡಿಸಬಹುದು. ಅವುಗಳಲ್ಲಿ ಕೆಲವು ಮಹತ್ವದ ಮ್ಯೂಚುಯಲ್ ಫಂಡ್ ಗಳನ್ನು ಇಲ್ಲಿ ವಿವರಿಸಲಾಗಿದೆ.

a) ವಲಯ (Sectoral) ಫಂಡ್ ಗಳು:
ಈ ವರ್ಗದ ಫಂಡ್ ಗಳು ಹಣವನ್ನು ಒಂದು ನಿರ್ದಿಷ್ಟ ಆರ್ಥಿಕ ವಲಯದ ಷೇರುಗಳಲ್ಲಿ, ಬಾಂಡ್ ಗಳಲ್ಲಿ ಹೂಡಿಕೆ ಮಾಡುತ್ತವೆ. ಇಲ್ಲಿ ಏನೇ ಲಾಭ ಅಥವಾ ನಷ್ಟ ಆದರೂ ಅದು ಆ ಆರ್ಥಿಕ ವಲಯದ ಪ್ರಗತಿ ಅಥವಾ ಅವನತಿ ಮೇಲೆ ನಿಂತಿದೆ. ಉದಾಹರಣೆಗೆ ICICI Prudential Technology Fund ಅನ್ನುವ ಒಂದು ಫಂಡ್ ಅದರ ಹೆಸರೇ ಸೂಚಿಸುವಂತೆ ಹೂಡಿಕೆದಾರರಿಂದ ಕ್ರೋಢೀಕರಿಸಿದ ಹಣವನ್ನು ಕೇವಲ ಒಂದು ವಲಯದ ಷೇರುಗಳಲ್ಲಿ ಅಂದರೆ ತಂತ್ರಜ್ಞಾನ ವಲಯದಲ್ಲಿ ಇರುವ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಅದೇ ರೀತಿ Nippon India Pharma Fund ತನ್ನ ಬಹುಪಾಲು ಸಂಪತ್ತನ್ನು ಔಷಧಿ ಉತ್ಪಾದನಾ ವಲಯದ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ.

b) ನಿಧಿಗಳ ನಿಧಿ (Fund of Funds ):
ಈ ವಿಧದ ಫಂಡ್ ಗಳು ತಮ್ಮ ಸಂಪತ್ತನ್ನು ಬೇರೊಂದು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತವೆ. ಇದು ಕೂಡ ಧೀರ್ಘ ಕಾಲಕ್ಕೆ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ ಒಪ್ಪುವಂತದ್ದು. ಇನ್ನೊಂದು ಲಾಭವೆಂದರೆ ಈ ಫಂಡ್ ಗಳು ಹಣವನ್ನು ವಿದೇಶಿ ಮ್ಯೂಚುಯಲ್ ಫಂಡ್ ಗಳಲ್ಲೂ ಹೂಡಿಕೆ ಮಾಡುವುದರಿಂದ ದೇಶೀಯ ಹೂಡಿಕೆದಾರರಿಗೆ ಪರೋಕ್ಷವಾಗಿ ವಿದೇಶಿ ಕಂಪೆನಿಗಳಲ್ಲಿ ಹಣ ಹೂಡುವ ಅವಕಾಶ ಸಿಕ್ಕಂತಾಗುತ್ತದೆ. ಮಿಗಿಲಾಗಿ ಈ ಮ್ಯೂಚುಯಲ್ ಫಂಡ್ ಗಳು ಬೇರೆ ಮ್ಯೂಚುಯಲ್ ಫಂಡ್ ಗಳಲ್ಲಿ ತೊಡಗಿಸುವುದರಿಂದಾಗಿ ನಷ್ಟದ ಅಪಾಯ ತುಂಬಾ ಕಡಿಮೆ ಅಥವಾ ಇಲ್ಲವೇ ಇಲ್ಲ ಅನ್ನಬಹುದು.

c) ವಿನಿಮಯ ಕೇಂದ್ರದಲ್ಲಿ ವಹಿವಾಟಾಗುವ ಫಂಡ್ ಗಳು. (Exchange Traded Funds (ETF):
ETFಗಳು ಒಂದು ವಿಶೇಷವಾದ ಮ್ಯೂಚುಯಲ್ ಫಂಡ್ ಗಳಾಗಿದ್ದು, ಇವುಗಳು ಷೇರುಗಳು ಮತ್ತು ಮ್ಯೂಚುಯಲ್ ಫಂಡ್ ಇವೆರಡರ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅಂದರೆ ಇವುಗಳು ಮ್ಯೂಚುಯಲ್ ಫಂಡ್ ಗಳಾಗಿದ್ದರೂ ಸಾಮಾನ್ಯ ಷೇರುಗಳಂತೆ ಈ ಫಂಡ್ ಗಳೂ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿರುತ್ತವೆ. ಮತ್ತು ಪ್ರತಿ ದಿನ ಷೇರು ಮಾರುಕಟ್ಟೆಯಲ್ಲಿ ಷೇರುಗಳ ವಹಿವಾಟು ನಡೆಯುವಂತೆ ಈ ಫಂಡ್ ಗಳ ಕೊಡು-ಕೊಳ್ಳುವಿಕೆ ನಡೆಯುತ್ತದೆ. ಉದಾಹರಣೆಗೆ LIC MF Exchange Traded Fund ಅನ್ನುವ ಒಂದು ಫಂಡ್ ರಾಷ್ಟ್ರೀಯ ಷೇರು ಮಾರುಕಟ್ಟೆ(NSE)ಯ ಸೂಚ್ಯಂಕ Nifty -50ರಲ್ಲಿ ಒಳಗೊಂಡ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತದೆ. ಷೇರುಗಳ ಬೆಲೆಗಳಲ್ಲಿ ವ್ಯತ್ಯಾಸ ಆದಂತೆ ಈ ಫಂಡ್ ನ ಮೌಲ್ಯವೂ ಬದಲಾಗುತ್ತಿರುತ್ತದೆ, ಮೇಲಾಗಿ ಈ ಫಂಡ್ ಕೂಡ NSE ಯಲ್ಲಿ ಇತರ ಷೇರುಗಳಂತೆ ಲಿಸ್ಟ್ ಆಗಿರುವ ಕಾರಣ, ನಮಗೆ ಯಾವಾಗ ಬೇಕೋ ಅವಾಗ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ.

ಹೀಗೆ ಅನೇಕ ವಿಧದ ಮ್ಯೂಚುಯಲ್ ಫಂಡ್ ಗಳು ಲಭ್ಯವಿದ್ದು ಹೂಡಿಕೆದಾರರು ತಮ್ಮ ತಮ್ಮ ಅಗತ್ಯತೆ ಅನುಗುಣವಾಗಿ ಮತ್ತು ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಸೂಕ್ತವಾದ ಫಂಡ್ ಗಳಲ್ಲಿ ಹೂಡಿಕೆ ಮಾಡಿ ಉತ್ತಮವಾದ ಲಾಭ ಗಳಿಸಬಹುದು. ಇನ್ನು ಅನೇಕ ನಮೂನೆಯ ಮ್ಯೂಚುಯಲ್ ಫಂಡ್ ಗಳು ಇವೆಯಾದರೂ ಅವೆಲ್ಲವನ್ನೂ ಇಲ್ಲಿ ವಿವರಿಸಲಾಗಿಲ್ಲ. ಮುಂದಿನ ಸಂಚಿಕೆಯಲ್ಲಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನುವ ಬಗ್ಗೆ ತಿಳಿದುಕೊಳ್ಳೋಣ. ಅಲ್ಲಿಯವರೆಗೆ ನೀವು ನಿಮ್ಮ ನಿಮ್ಮ ಮನೆಗಳಲ್ಲಿ ಸುರಕ್ಷಿತವಾಗಿರಿ. ಕೊರೊನ ವೈರಸ್ ವಿರುದ್ಧ ಹೋರಾಡಲು ಸಹಕರಿಸಿ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.