ಇ-ರುಪಿ ಎಂಬ ನಗದು ರಹಿತ ಪಾವತಿ ವ್ಯವಸ್ಥೆ

0

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಪ್ರಾಮುಖ್ಯತೆ ಪಡೆಯುತ್ತಿರುವುದು ನಮಗೆಲ್ಲ ತಿಳಿದ ವಿಚಾರ. ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ನಲಿದಾಡುತ್ತಿರುವ ಈ ಯುಗದಲ್ಲಿ ತ್ವರಿತವಾಗಿ ಹಣ ವರ್ಗಾವಣೆ ಮಾಡಲು ಹಲವು ತಂತ್ರೋಪಾಯಗಳನ್ನು ಕಂಡು ಹಿಡಿದು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಸರಕಾರದಿಂದ ಬರುವ ಸವಲತ್ತುಗಳನ್ನು ಎಲ್ಲೂ ಸೋರಿಕೆಯಾಗದ ರೀತಿಯಲ್ಲಿ ಫಲಾನುಭವಿಗಳ ಕೈಗೆ ತಲುಪಿಸಲು ಸರಕಾರಗಳು ಹರಸಾಹಸ ಪಡುತ್ತಿವೆ. ಅದರ ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕತೆಯ ಚೌಕಟ್ಟಿನೊಳಗೆ ಬರಬೇಕು ಎನ್ನುವ ಮಹತ್ವಾಕಾಂಕ್ಷೆಯ ವಿತ್ತೀಯ ಸೇರ್ಪಡೆ (Financial Inclusion) ಕಾರ್ಯಕ್ರಮದಂತೆ ಎಲ್ಲ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿ ನಡೆಯಬೇಕು ಮತ್ತು ಆ ಮೂಲಕ ಒಂದೊಮ್ಮೆ ವಿಸ್ತಾರವಾಗಿ ಚಾಚಿದ್ದ ಕಪ್ಪು ಹಣದ ಕಬಂಧ ಬಾಹುಗಳನ್ನು ತುಂಡರಿಸಬೇಕು ಎನ್ನುವ ಉದ್ದೇಶದಿಂದ ಸರಕಾರ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಅದಕ್ಕಾಗಿಯೇ National Payment Corporation of India (NPCI) ಎಂಬ ಸಂಸ್ಥೆಯನ್ನೂ ಹುಟ್ಟುಹಾಕಲಾಗಿದೆ. ನಾವೆಲ್ಲ ಈಗ ಉಪಯೋಗಿಸುತ್ತಿರುವ Google Pay, Phone Pay ಮುಂತಾದ ಪಾವತಿ ವ್ಯವಸ್ಥೆಗಳು ಇಂತಹ ಯೋಜನೆಗಳ ಫಲಶ್ರುತಿಗಳು. ಜನಧನ ಎನ್ನುವ ಎಲ್ಲರಿಗು ಬ್ಯಾಂಕ್ ಅಕೌಂಟ್ ಗಳು ಇರಲೇಬೇಕು ಅನ್ನುವ ಯೋಚನೆಯ ಉದ್ದೇಶವೂ ಸರಕಾರದ ಸವಲತ್ತು ಗಳನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ (Direct Benefit Transfer (DBT )) ಮಾಡಬೇಕು ಎನ್ನುವುದೇ ಆಗಿತ್ತು . ಅದರಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಸಾಧಿಸಿದ್ದು ಸುಳ್ಳಲ್ಲ.

ಇಂತಹ ಯೋಜನೆಗಳ ಸಾಲಿಗೆ ಇತ್ತೀಚಿಗೆ ಸೇರಿಕೊಂಡ ಇನ್ನೊಂದು ಯೋಜನೆಯೇ ಇ-ರುಪಿ (E-Rupi) ಯೋಜನೆ. ಇದನ್ನು ಯೋಜನೆ ಅನ್ನುವುದಕ್ಕಿಂತ ಒಂದು ವಿಧದ ಪಾವತಿ ವ್ಯವಸ್ಥೆ ಅನ್ನಬಹುದು. ಇದೊಂದು ಇಲೆಕ್ಟ್ರಾನಿಕ್ ರೂಪದ ಗಿಫ್ಟ್ ಚೀಟಿ (Voucher) ತರಹದ ವ್ಯವಸ್ಥೆ. ನಮ್ಮ ದೇಶದ ಪ್ರಧಾನ ಮಂತ್ರಿಗಳು ಇದನ್ನು ಉದ್ಘಾಟನೆ ಮಾಡಿದ್ದನ್ನು ನೀವು ಸುದ್ದಿ ಮಾಧ್ಯಮಗಳಲ್ಲಿ ನೋಡಿರಬಹುದು. ಈ ವ್ಯವಸ್ಥೆಯನ್ನು ಮೇಲೆ ಹೇಳಿದ NPCI ಸಂಸ್ಥೆಯು ಕೇಂದ್ರ ಸರಕಾರದ ಆರ್ಥಿಕ ಇಲಾಖೆ ಮತ್ತು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದೆ. ಇ-ರುಪಿ ಅನ್ನುವುದು ನಗದು ರಹಿತ, ಸಂಪರ್ಕ ರಹಿತ ಪಾವತಿ ವಿಧಾನ. ಇದಕ್ಕೆ ಬ್ಯಾಂಕ್ ಅಕೌಂಟ್ ಇರಬೇಕಾದ ಅವಶ್ಯಕತೆಯಿಲ್ಲ. ನಿಮ್ಮಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳ ಅಗತ್ಯವೂ ಇಲ್ಲ, ಯಾಕೆಂದರೆ ಈ ವ್ಯವಸ್ಥೆಗೆ ಇಂಟರ್ನೆಟ್ ನ ಅವಶ್ಯಕತೆಯಿಲ್ಲ. ಇದಕ್ಕೆ ಬೇಕಾಗುವುದು ಮುಖ್ಯವಾಗಿ ಎರಡೇ, ಮೊದಲನೆಯದ್ದು ಒಂದು ಸಾಧಾರಣ ಮೊಬೈಲ್ ಫೋನ್ ಮತ್ತು ಎರಡೆನೆಯದ್ದು ಒಂದು ಅಧಿಕೃತ ಫೋನ್ ನಂಬರ್. ಹಾಗಾಗಿ ಇದನ್ನು ಗ್ರಾಮೀಣ ಭಾಗದ ಮತ್ತು ಬಡ ಜನರು ಇದನ್ನು ಸುಲಲಿತವಾಗಿ ಉಪಯೋಗ ಮಾಡಿಕೊಳ್ಳಬಹುದು.

ಇ-ರುಪಿಯ ಮೂಲ ಉದ್ದೇಶವೇ ಸರಕಾರ ಜನರಿಗೆ ಕೊಡಮಾಡುವ ಆರ್ಥಿಕ ಸಹಾಯಧನಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದು. ಈಗ ಈ ವ್ಯವಸ್ಥೆ ಅರೋಗ್ಯ ಇಲಾಖೆಯಲ್ಲಿ ಸಹಾಯಧನ ಪಡೆಯುವ ಜನರಿಗೆ ಒದಗಿಸಲಾಗಿದೆ. ಮುಂದಕ್ಕೆ ಇದನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರದ ನೆರವು ಪಡೆಯಲು ವಿಸ್ತರಿಸಬಹುದು. ಈಗ ಈ ವ್ಯವಸ್ಥೆ ಬೇರೆ ಬೇರೆ ಇಲಾಖೆಗಳಲ್ಲಿ ನೆರವನ್ನು ಪಡೆಯಲು ಹೇಗೆ ಸಾಧ್ಯವಾಗುತ್ತದೆ ಎನ್ನುದನ್ನು ತಿಳಿದುಕೊಳ್ಳೋಣ.

ಉದಾಹರಣೆಗೆ ರಸಗೊಬ್ಬರ ಖರೀಧಿ ಮಾಡಲು ರೈತರಿಗೆ ಸರಕಾರ ಸಹಾಯಧನ ನೀಡುತ್ತದೆ. ಈ ಸಹಾಯಧನ ಪಡೆಯಲು ಇಚ್ಚಿಸುವ ರೈತ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸುತ್ತಾನೆ. ಅವನ ಅರ್ಜಿಯನ್ನು ಪರಿಶೀಲಿಸಿ ಅವನಿಗೆ ಸಹಾಯಧನ ಮಂಜೂರಾದರೆ ಅವನ ಮೊಬೈಲ್ ನಂಬರ್ ಗೆ ಒಂದು SMS ಸಂದೇಶ ಅಥವಾ Quick Response (QR) ಕೋಡ್ ನ್ನು ಕಳಿಸಲಾಗುತ್ತದೆ. ಅವನು ಅದನ್ನು ತನ್ನ ಹತ್ತಿರದ ಅಧಿಕೃತ ರಸಗೊಬ್ಬರ ಡೀಲರ್ ನ ಹತ್ತಿರ ತೆಗೆದುಕೊಂಡು ಹೋಗಬೇಕು. ಅಲ್ಲಿ ತನ್ನ ಮೊಬೈಲ್ ಗೆ ಬಂದ ಸಂದೇಶ ಅಥವಾ QR ನ್ನು ತೋರಿಸಬೇಕು. ರಸಗೊಬ್ಬರ ಡೀಲರ್ ಆ ಸಂದೇಶ ವನ್ನು ತನ್ನ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನಮೂದಿಸಿದಾಗ ಮತ್ತೆ ಅದೇ ರೈತನ ಮೊಬೈಲ್ ಗೆ ಒಂದು OTP ಬರುತ್ತದೆ. ಆ OTP ಯನ್ನು ಅವನು ಡೀಲರ್ ಗೆ ನೀಡಿದಾಗ ಡೀಲರ್ ನ ಖಾತೆಗೆ ಸರಕಾರದಿಂದ ನೇರವಾಗಿ ಹಣ ಜಮಾವಣೆ ಆಗುತ್ತದೆ. ಹೀಗೆ ಸರಕಾರದ ಇಲಾಖೆಯಿಂದ ಸಂಬಂಧಪಟ್ಟ ಕಂಪನಿ /ಸಂಸ್ಥೆ/ ವ್ಯಕ್ತಿಗೆ ಯಾವುದೇ ಮಧ್ಯವರ್ತಿಯ ಹಸ್ತಕ್ಷೇಪವಿಲ್ಲದೆ, ಇಂಟರ್ನೆಟ್ ನ ಸಮಸ್ಯೆಗಳಿಲ್ಲದೆ, ಕ್ಲಪ್ತ ಸಮಯದಲ್ಲಿ, ಎಲ್ಲೂ ‘ಸೋರಿಕೆ’ಯಾಗದ ರೀತಿಯಲ್ಲಿ ಹಣ ವರ್ಗಾವಣೆ ಮಾಡಬಹುದು. ಇದು ಮುಖ್ಯವಾಗಿ ಸಂಸ್ಥೆ-ಸಂಸ್ಥೆಗಳ ನಡುವೆ ವ್ಯವಹಾರ ಆಗಿರುವುದರಿಂದ ಯಾವ ಉದ್ದೇಶಕ್ಕಾಗಿ ಹಣಕಾಸು ನೆರವು ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದನ್ನು ಬಳಸುವ ಅನಿವಾರ್ಯತೆ ಇದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MG NREGA), ಅಯುಷ್ಮಾನ್ ಭಾರತ್, ಉಜ್ವಲ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಪಿಎಂ ಕಿಸಾನ್ ಮುಂತಾದ ಯೋಜನೆಗಳಲ್ಲಿ ಈ ತರದ ಪಾವತಿ ವ್ಯವಸ್ಥೆಯಲ್ಲಿ ಕಾಲಕ್ರಮದಲ್ಲಿ ಅಳವಡಿಸಿಕೊಳ್ಳಬಹುದು.

ಇಲ್ಲಿ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇ-ರುಪಿ ಯಾವುದೇ ರೂಪದ ಡಿಜಿಟಲ್ ಕರೆನ್ಸಿ ಅಲ್ಲ. ಅಂದರೆ ನಿಮ್ಮ ಮೊಬೈಲ್ ಗೆ ಬಂದ SMS ಅಥವಾ QRನ್ನು ನೀವು ಬೇಕೆಂದರಲ್ಲಿ ತೋರಿಸಿ ಬೇರೆ ಯಾವುದೇ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಸದ್ಯಕ್ಕೆ ಇಲ್ಲ. ಮತ್ತು ಒಂದು SMS ಸಂದೇಶವನ್ನು ಒಂದು ಸಲಕ್ಕೆ ಮಾತ್ರ ಬಳಸಬಹುದು.

Related News:

ಇನ್ಮುಂದೆ ಹಣ ಪಾವತಿ ಮತ್ತಷ್ಟು ಸುಲಭ; ದೇಶದಲ್ಲಿ ‘ಇ-ರುಪಿ’ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.