ನವದೆಹಲಿ: ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ. 345 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ.
ನೂತನ ಐಟಿ ನಿಯಮಗಳ ಪ್ರಕಾರ ಐದು ಮಿಲಿಯನ್ ಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣಗಳು ಪ್ರತಿ ತಿಂಗಳು ಕುಂದುಕೊರತೆ ವರದಿಯನ್ನು ಪ್ರಕಟಿಸಬೇಕಾಗಿದೆ. ಸ್ವೀಕರಿಸಲಾಗಿರುವ ದೂರುಗಳು ಹಾಗೂ ದೂರಿನ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನು ವಿವರಿಸಬೇಕಾಗಿದೆ.
ಅಪಾಯಕಾರಿ ಅಥವಾ ಹಾನಿಕಾರಕ ಅನಗತ್ಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ. ಈ ರೀತಿಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಪತ್ತೆಹಚ್ಚಲು ನಾವು ಅಡ್ವಾನ್ಸ್ ಡ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ರೀತಿಯಾಗಿ ಗುರುತಿಸಿರುವ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಬ್ಯಾನ್ ಮಾಡಿರುವುದಾಗಿ ವಾಟ್ಸಾಪ್ ತಿಳಿಸಿದೆ.
ಈ ರೀತಿ ಬ್ಯಾನ್ ಮಾಡಿರುವ ವಾಟ್ಸಾಪ್ ಖಾತೆಗಳಲ್ಲಿ 95 ಶೇಕಡಾದಷ್ಟು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಖಾತೆಗಳಾಗಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಹೊಸ ತಂತ್ರಜ್ಞಾನಗಳ ಅಳವಡಿಕೆ ಹೆಚ್ಚಾದಂತೆ 2019ರಿಂದ ಬ್ಯಾನ್ ಆಗುವ ಖಾತೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಸ್ವಯಂ ಚಾಲಿತವಾಗಿ ಅಥವಾ ಒಂದೇ ಬಾರಿಗೆ ಹೆಚ್ಚಿನ ರೀತಿಯಲ್ಲಿ ಸಂದೇಶ ಕಳುಹಿಸಲು ಪ್ರಯತ್ನಿಸುವ ಖಾತೆಗಳನ್ನು ಗುರುತಿಸಲಾಗಿದೆ. ಜಾಗತಿಕವಾಗಿ ತಿಂಗಳಿಗೆ ಸರಾಸರಿ ಎಂಟು ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ.