ಭೋಪಾಲ್: ಶೀಘ್ರದಲ್ಲಿಯೇ ಮದ್ಯದ ಅಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಉಮಾಭಾರತಿ ಭೋಪಾಲ್‍ನಲ್ಲಿ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ. ಕ್ಷೇತ್ರ ಭೇಟಿಯ ಕೊನೆಯ ದಿನವಾದ ಇಂದು ರಾಜ್ಯದಲ್ಲಿ ಮಧ್ಯ ಮಾರಾಟ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದ ಅವರು, ಶೀಘ್ರದಲ್ಲೇ ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರ ಮದ್ಯನೀತಿಯ ಕುರಿತು ಘೋಷಣೆ ಮಾಡಲು ತಡಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಉಮಾ ಭಾರತಿ, ಓರ್ಚಾದಲ್ಲಿರುವ ಮದ್ಯದಂಗಡಿ ಹೊರಗೆ 11 ಹಸುಗಳನ್ನು ಕಟ್ಟಿಹಾಕಲು ವ್ಯವಸ್ಥೆ ಮಾಡಲು ತಿಳಿಸಿದ್ದು, ಅವುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಯನ್ನೂ ಮಾಡಲು ತಿಳಿಸಿದ್ದೇನೆ. ನನ್ನನ್ನು ತಡೆಯುವ ಧೈರ್ಯ ಯಾರಿಗಾದರೂ ಇದ್ದರೆ ತಡೆಯಿರಿ ನೋಡೋಣ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಭಗವಾನ್ ಶ್ರೀರಾಮಚಂದ್ರನ ಹೆಸರಿನಲ್ಲಿ ಸರ್ಕಾರಗಳು ರಚನೆಯಾಗುತ್ತಿವೆ. ಆದರೆ ಓರ್ಚಾದಲ್ಲಿರುವ ರಾಮರಾಜ ದೇವಸ್ಥಾನದ ಬಳಿಯೇ ಮದ್ಯದಂಗಡಿ ತೆರೆಯಲು ಸರ್ಕಾರವೇ ಅನುಮತಿ ನೀಡಿರುವುದು ಬೇಸರದ ಸಂಗತಿ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದಲ್ಲಿ ಮುಂಚೂಣಿಯಲ್ಲಿದ್ದು, ಈ ಹಿಂಸೆಯ ಪ್ರವೃತ್ತಿಗೆ ಮದ್ಯ ಸೇವನೆಯು ಒಂದು ಕಾರಣ ಎಂದು ಆರೋಪಿಸಿದರು.