ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಎಂದರೆ ಬರೀ ಚಳಿಯಲ್ಲ, ಅದು ಋತುಮಾನಗಳಲ್ಲೇ ತುಂಬಾ ಸುಂದರ ಕಾಲ.
ಬೆಚ್ಚಗೆ ಹೊದ್ದು ಮಲಗುವ ಬಯಕೆ ಹುಟ್ಟಿಸುವ ಚಳಿಗಾಲದಲ್ಲಿ ಉದಾಸೀನವೂ ಜೊತೆಯಾಗುತ್ತದೆ. ಆದರೆ ಸೌಂದರ್ಯದ ಬಗ್ಗೆ ಉದಾಸೀನ ಸಲ್ಲದು. ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ಕೋಮಲ ಚರ್ಮವು ಒಡೆಯಲು ಆರಂಭಿಸುತ್ತದೆ. ರಂಗಿನ ತುಟಿಗಳಲ್ಲಿ ಬಿರುಕು ಮೂಡುತ್ತದೆ. ಅದರಲ್ಲೂ ಹೆಂಗಳೆಯರ ಚರ್ಮ ತುಂಬಾ ಸೂಕ್ಷ್ಮ ಹಾಗೂ ಮೃದು. ಚಳಿಗಾಲ ನಿಮ್ಮ ಸುಂದರ ಮುಖ ಹಾಗೂ ಚರ್ಮದ ಅಂದವನ್ನು ಕೆಡಿಸುವ ಮೊದಲೇ ಒಂದಿಷ್ಟು ಜಾಗೃತೆ ವಹಿಸಿದರೆ ಉತ್ತಮ.
ಅದರಿಂದ ಚಳಿಗಾಲ ಪೂರ್ತಿ ನಿಮ್ಮ ಚರ್ಮದ ಕಾಂತಿ ಹಾಗೇ ಇರುತ್ತದೆ. ಚಳಿಯಲ್ಲಿ ಚರ್ಮ ರಕ್ಷಿಸಲು ಕೆಲವು ಟಿಪ್ಸ್‌ಗಳನ್ನು ಪಾಲಿಸಿದರೆ ಸೌಂದರ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಆಹಾರ ಕ್ರಮದ ಮೇಲೆ ನಿಗಾ ಇರಲಿ
ಚರ್ಮದ ಸೌಂದರ್ಯ ಕೇವಲ ನಾವು ಹಚ್ಚುವ ಕ್ರೀಮ್‌ಗಳ ಮೇಲಷ್ಟೇ ಅವಲಂಬಿತವಾಗಿಲ್ಲ. ತಿನ್ನುವ ಆಹಾರವೂ ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ತರಕಾರಿ, ಹಣ್ಣು, ಎಳನೀರಿನ ಸೇವನೆಯಿಂದ ದೇಹಕ್ಕೆ ಬೇಕಾಗುವ ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತದೆ. ಇದು ಚರ್ಮದ ಕಾಂತಿ ಹೆಚ್ಚಲು ಸಹಕಾರಿ.
ತರಕಾರಿ ಹಾಗೂ ಹಣ್ಣಿನ ಸೇವನೆಯಿಂದಲೂ ದೇಹದಲ್ಲಿ ನೀರಿನಂಶ ಸಂಗ್ರವಾಗುತ್ತದೆ. ಹಾಗೂ ಆಲೀವ್ ಎಣ್ಣೆಯನ್ನು ಆಹಾರದೊಂದಿಗೆ ಬಳಸುವುದರಿಂದ ಚರ್ಮವು ಮೃದುವಾಗತ್ತದೆ.
ಬೆಚ್ಚಗಿನ ನೀರಿನಲ್ಲಿ ಸ್ನಾನ
ಈ ಸೀಸನ್‌ನಲ್ಲಿ ಚರ್ಮದಲ್ಲಿ ಬಿರುಕುಗಳು ಹೆಚ್ಚಾಗಿ ಕಾಣಸಿಗುತ್ತದೆ. ಹಾಗಾಗಿ ನಿಮ್ಮ ಮುಖವನ್ನು ತೊಳೆಯಲು, ಸ್ನಾನ ಮಾಡಲು ಬೆಚ್ಚಗಿನ ನೀರನ್ನು ಬಳಸಿ. ಅತಿ ಹೆಚ್ಚು ಬಿಸಿ ನೀರಿನ ಬಳಕೆ ಬೇಡ. ಸ್ನಾನ ಮಾಡಿದ ನಂತರ ದೇಹದ ಎಲ್ಲಾ ಕಡೆ ಮಾಯಿಶ್ಚರೈಸರ್ ಹಚ್ಚಿ. ಇದು ಶುಷ್ಕತೆಯನ್ನು ತಡೆದು ದೇಹವನ್ನು ತೇವಾಂಶವಿರುವ ಹಾಗೆ ನೋಡಿಕೊಳ್ಳುತ್ತದೆ.
ಚರ್ಮವನ್ನು ಮಾಯಿಶ್ಚರೈಸರ್ ಮಾಡಿ
ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್‌ನ್ನು ನೀವು ಆಯ್ಕೆ ಮಾಡಿಕೊಳ್ಳಿ. ದೇಹದ ಪ್ರಮುಖ ಭಾಗಗಳಾಗಿರುವಂತಹ ಕೈ, ಕಾಲು, ಉಗುರು, ತುಟಿಗಳಿಗೆ ಇದನ್ನು ಹಚ್ಚಿಕೊಳ್ಳಿ. ಇವುಗಳನ್ನು ಸರಿಯಾಗಿ ಮಾಯಿಶ್ಚರೈಸ್ ಮಾಡಿ.
ಇದರೊಂದಿಗೆ ತುಟಿಗಳಿಗೆ ಲಿಪ್ ಬಾಮ್ ಹಚ್ಚಿಕೊಳ್ಳಿ. ಇದು ಒಳ್ಳೆಯ ರೀತಿಯಿಂದ ಕೆಲಸ ಮಾಡುವುದು. ಚರ್ಮವು ಎಣ್ಣೆಯಂಶದಿಂದ ಕೂಡಿದ್ದರೂ ನೀವು ಚರ್ಮಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮಾಯಿಶ್ಚರೈಸರ್ ಲೋಷನ್ ಹಚ್ಚಬೇಕು.
ಸನ್ ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ
ಚಳಿಗಾಲದಲ್ಲಿ ಆಗಸದಲ್ಲಿ ಮೋಡಗಳು ಕಡಿಮೆ ಇರುವುದರಿಂದ ಸೂರ್ಯನ ಕಿರಣಗಳ ಪ್ರಭಾವ ಹೆಚ್ಚಿರುತ್ತದೆ. ಮನೆಯಿಂದ ಹೊರಗೆ ಹೋದಂತಹ ಸಂದರ್ಭದಲ್ಲಿ ಸೂರ್ಯನ ಕಿರಣಗಳು ನಮ್ಮ ಚರ್ಮವನ್ನು ಹಾನಿ ಮಾಡುತ್ತವೆ.
ಮುಖದ ಮೇಲೆ ಅಲ್ಲಲ್ಲಿ ಕೆಂಪು ಕಲೆಗಳು ಮೂಡಿ ಬರುವಂತೆ ಮಾಡುವುದರಿಂದ ನಮ್ಮ ಸೂಕ್ಷ್ಮವಾದ ಚರ್ಮವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾಗಿರುವುದು ತುಂಬಾ ಅಗತ್ಯ. ಹಾಗಾಗಿ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವ ನಿಮ್ಮ ಚರ್ಮದ ಭಾಗವನ್ನು ಮಾಯಿಶ್ಚರೈಸ್ ಮಾಡುವಂತಹ ಸನ್ ಸ್ಕ್ರೀನ್ ಅಪ್ಲೈ ಮಾಡಿ.
ಹಾಲಿನ ಕೆನೆಯ ಪ್ಯಾಕ್ ಬಳಸಿ
ಒಂದು ಟೀ ಚಮಚ ಜೇನುತುಪ್ಪ, ಒಂದು ಚಮಚ ಹಾಲಿನ ಕೆನೆಯೊಂದಿಗೆ ಚಿಟಿಕೆಯಷ್ಟು ಕೇಸರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ನಿಮ್ಮ ಮುಖಕ್ಕೆ ಹಚ್ಚಿ 30ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ.
ಫೇಸ್ ಆಯಿಲ್ ಬಳಕೆ ಮಾಡಿ
ನಿಮ್ಮ ಮುಖದ ಭಾಗದ ತೇವಾಂಶವನ್ನು ಹಾಗೆ ಉಳಿಸಿಕೊಳ್ಳಲು ಮತ್ತು ನಿಮ್ಮ ತ್ವಚೆಯ ಹೆಚ್ಚಿನ ನೀರಿನ ಅಂಶ ಹಾನಿಯಾಗದಂತೆ ಕಾಪಾಡಿಕೊಳ್ಳಲು ಫೇಸ್ ಆಯಿಲ್ ಬಳಕೆ ಮಾಡಬಹುದು.
ಇದರಿಂದ ಮುಖದ ಮೇಲೆ ಕಂಡುಬರುವ ಮೊಡವೆಗಳು ಮಾಯವಾಗುತ್ತವೆ. ನಿಮ್ಮ ಚರ್ಮದ ಭಾಗದಲ್ಲಿ ಹೆಚ್ಚು ತೇವಾಂಶವನ್ನು ಹಾಗೆ ಉಳಿಸಿಕೊಳ್ಳಲು ಇದು ನೆರವಾಗುತ್ತದೆ.
ಕೇವಲ ಸೌಮ್ಯ ಉತ್ಪನ್ನಗಳನ್ನು ಮಾತ್ರ ಉಪಯೋಗಿಸಿ
ಈ ಸೀಸನ್‌ನಲ್ಲಿ ನೀವು ಸೌಂದರ್ಯವರ್ಧಕ ಉತ್ಪನ್ನಗಳನ್ನು ಅತಿ ಹೆಚ್ಚಾಗಿ ಬಳಸಲು ಹೋಗಬಾರದು. ನೀವು ಬಳಸುವ ಉತ್ಪನ್ನಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು ನಿಮ್ಮ ಸೌಂದರ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ನೀರು ಕುಡಿಯಿರಿ
ಚಳಿಗಾಲದಲ್ಲಿ ಬಾಯಾರಕೆ ಕಡಿಮೆ ಆಗುವ ಕಾರಣದಿಂದಾಗಿ ಜನರು ನೀರು ಕೂಡ ಕಡಿಮೆ ಕುಡಿಯುವರು. ಆದರೆ ಚರ್ಮವನ್ನು ಹೈಡ್ರೇಟ್ ಆಗಿಡಲು ನೀರು ಅತೀ ಅಗತ್ಯ. ಹೀಗಾಗಿ ಚಳಿಗಾಲದಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ.